Thursday, March 4, 2021

ರಾಜ್ಯಮಟ್ಟದಲ್ಲಿ ಸದ್ದುಮಾಡಿದ ಸಂಗಮೇಶ್ವರ್ ಪ್ರಕರಣ :

ಕ್ಷೇತ್ರದಲ್ಲೂ ವಿವಾದಕ್ಕೆ ಕಾರಣವಾಯ್ತು ಶಾಸಕರ ಒರಟುತನ


     ಭದ್ರಾವತಿ, ಮಾ. ೪: ವ್ಯಕ್ತಿ ಪ್ರತಿಷ್ಠೆಗೆ ಅಂಟಿಕೊಂಡಿರುವ ಕ್ಷೇತ್ರದ ರಾಜಕಾರಣದಲ್ಲಿ ಕಳೆದ ೪ ದಶಕಗಳಿಂದ ಒರಟುತನ ಕಂಡು ಬರುತ್ತಿದ್ದು, ಕೆಲವೊಂದು ಘಟನೆಗಳು ರಾಜಕಾರಣದಲ್ಲಿ ಯಾವುದಕ್ಕೂ ಸಿದ್ದ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಿವೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಡುವಿನ ರಾಜಕೀಯ ಹೋರಾಟ ಸ್ಥಳೀಯವಾಗಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿವೆ. ಆದರೂ ಸಹ ಕ್ಷೇತ್ರದ ಮತದಾರರು ಈ ಇಬ್ಬರ ಪೈಕಿ ಒಬ್ಬರ ನಂತರ ಒಬ್ಬರನ್ನು ಆಯ್ಕೆ ಮಾಡಿಕೊಂಡು ಬಂದಿದ್ದರು. ಇದೀಗ ಅಪ್ಪಾಜಿ ನಮ್ಮೊಂದಿಗಿಲ್ಲ. ಉಳಿದಿರುವುದು ಸಂಗಮೇಶ್ವರ್ ಮಾತ್ರ. ಇದೀಗ ಅವರ ರಾಜಕೀಯ ಒರಟುತನ ರಾಜ್ಯಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕ್ಷೇತ್ರದ ಜನರಿಗೆ ಇದು ಹೊಸದೇನಲ್ಲ. ಆದರೆ ವಿಧಾನಸಭಾಧ್ಯಕ್ಷರವರೆಗೆ ತಲುಪಿದ ಪರಿ ಹಾಗು ಸಭಾಧ್ಯಕ್ಷರು ತೆಗೆದುಕೊಂಡ ಕ್ರಮ ಕ್ಷೇತ್ರದ ಪ್ರಜ್ಞಾವಂತ ನಾಗರೀಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
   ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರ ಮೇಲೆ ಪೊಲೀಸರು ಜಾತಿನಿಂದನೆ ದೂರು ದಾಖಲಿಸಿಕೊಂಡಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡು ವಿಧಾನಸಭೆಯಲ್ಲಿ ನಡೆದುಕೊಂಡ ಪರಿ ಹಲವು ವಿವಾದಗಳಿಗೆ ಕಾರಣವಾಗಿದೆ.
    ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಸಂಗಮೇಶ್ವರ್ ವಿಧಾನಸಭೆಯಲ್ಲಿ ಈ ರೀತಿ ನಡೆದು ಕೊಳ್ಳಲಿಲ್ಲ. ಈ ಹಿಂದೆ ಈ ರೀತಿ ನಡೆದುಕೊಂಡಿದ್ದಲ್ಲಿ ಎರಡು ಕಾರ್ಖಾನೆಗಳು ಅಭಿವೃದ್ಧಿ ಕಾಣುತ್ತಿದ್ದವು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.  
     ಶಾಸಕರ ನಡೆ ಸರಿತಪ್ಪು ಎನ್ನುವ ಬದಲು ಪ್ರತಿಯೊಬ್ಬ ಸದಸ್ಯರು ಸಂವಿಧಾನ ಹಾಗು ಸದನಕ್ಕೆ ಗೌರವ ನೀಡಬೇಕಾಗುತ್ತದೆ. ಸದನದ ಮಾನಮರ್ಯಾದೆ ಕಾಪಾಡುವುದು ಸದಸ್ಯರ ಕರ್ತವ್ಯವಾಗಿದೆ. ತಮ್ಮ ವೈಯಕ್ತಿಕ ವಿಚಾರಕ್ಕೆ ಈ ಪರಿ ನಡೆದುಕೊಂಡಿರುವುದು ಸರಿಯಲ್ಲ. ಒಂದು ವೇಳೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಈ ಪರಿ ವರ್ತಿಸಿದ್ದಲ್ಲಿ ಮೆಚ್ಚುವಂತಹ ವಿಚಾರವಾಗಿರುತ್ತಿತ್ತು ಎನ್ನುತ್ತಾರೆ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್.
    ಶಾಸಕರ ಯೋಗ್ಯತೆ ಏನೆಂಬುದನ್ನು ಅವರ ವರ್ತನೆಯೇ ತೋರಿಸುತ್ತದೆ. ಶಾಸಕರ ವರ್ತನೆಯಿಂದ ಕ್ಷೇತ್ರದ ಜನರು ತಲೆ ತಗ್ಗಿಸುವಂತಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

No comments:

Post a Comment