ಭದ್ರಾವತಿ ಜನ್ನಾಪುರದ ಅಪರಂಜಿ ಅಭಿನಯ ಶಾಲೆಯಲ್ಲಿ ಶನಿವಾರ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಮಾ. ೨೭: ರಂಗ ಕಲೆ ಮೂಲಕ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ರಂಗಕಲಾವಿದ, ಚಲನಚಿತ್ರ ನಟ ಅಪರಂಜಿ ಶಿವರಾಜ್ ಹೇಳಿದರು.
ಅವರು ಶನಿವಾರ ಜನ್ನಾಪುರದಲ್ಲಿ ಆರಂಭಿಸಿರುವ ಅಪರಂಜಿ ಅಭಿನಯ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸುವ ಮೂಲಕ ಮಾತನಾಡಿದರು.
ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ರಂಗಕಲೆ ಸಹಕಾರಿಯಾಗಿದೆ. ಉತ್ತಮ ವ್ಯಕ್ತಿತ್ವದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳ ಹಿಂದೆ ಆರಂಭಿಸಿದ ಶಾಲೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ರಂಗ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹೊಂದಿದ್ದಾರೆ. ಆದರೆ ರಂಗ ಕಲೆ ಮೂಲಕ ಮಕ್ಕಳು ಸುಲಲಿತವಾಗಿ ಮಾತನಾಡುವ ಜೊತೆಗೆ ತಮ್ಮ ಪ್ರತಿಭೆಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
ಅಭಿನಯ ಶಾಲೆಯ ಪುಷ್ಪಲತಾ ಮಾತನಾಡಿ, ಮಕ್ಕಳನ್ನು ಅಭಿನಯ ಶಾಲೆಗೆ ಸೇರಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕೆಂದರು.
ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಗು ಪೋಷಕರು ಉಪಸ್ಥಿತರಿದ್ದರು.
No comments:
Post a Comment