ಮಸ್ಟರಿಂಗ್ ಕೇಂದ್ರಗಳಿಂದ ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು-ಸಿಬ್ಬಂದಿಗಳು
ಮಂಗಳವಾರ ನಡೆಯಲಿರುವ ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಚುನಾವಣಾ ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು-ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜನೆಗೊಳಿಸಿರುವುದು.
ಭದ್ರಾವತಿ, ಏ. ೨೬: ರಾಜ್ಯಾದ್ಯಂತ ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಒಂದೆಡೆ ರಾಜ್ಯ ಸರ್ಕಾರ ಏ.೨೭ರ ರಾತ್ರಿಯಿಂದ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಮತ್ತೊಂದೆಡೆ ಚುನಾವಣಾ ಆಯೋಗ ಹಲವು ಸವಾಲುಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚನಾವಣೆ ಮತದಾನವನ್ನು ಯಶಸ್ವಿಯಾಗಿ ನಡೆಸಲು ಸಿದ್ದತೆಗಳನ್ನು ಕೈಗೊಂಡಿದೆ. ಈ ಬಾರಿ ನಗರಸಭೆ ೩೫ ವಾರ್ಡ್‌ಗಳ ಪೈಕಿ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಯೊಬ್ಬರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಒಂದು ವಾರ್ಡಿನ ಚುನಾವಣೆ ರದ್ದಾಗಿದೆ.
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಚುನಾವಣಾ ಮಸ್ಟರಿಂಗ್ ಕೇಂದ್ರದಲ್ಲಿ ಈ ಕುರಿತು ಮಾಹಿತಿ ನೀಡಿದ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಈ ಬಾರಿ ಚುನಾವಣೆಯಲ್ಲಿ ಒಟ್ಟು ೧,೨೬,೬೧೩ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಈ ಪೈಕಿ ೬೧,೩೫೫ ಪುರುಷ ಹಾಗು ೬೫,೨೫೮ ಮಹಿಳಾ ಮತದಾರರಿದ್ದು, ೨ ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು ೧೩೯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಸುಮಾರು ೬೦೦ ಮಂದಿ ಚುನಾವಣಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಒಂದು ಮತಗಟ್ಟೆಗೆ ತಲಾ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಹಾಗು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಅಗತ್ಯವಿರುವಷ್ಟು ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರು ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ಹಾಗು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.
ಅಭ್ಯರ್ಥಿಗಳಲ್ಲಿ ಆತಂಕ:
ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದ ಕರ್ಪ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಕೆಲ ಸಮಯ ಅಭ್ಯರ್ಥಿಗಳಲ್ಲಿ ಚುನಾವಣೆ ಮುಂದೂಡುವ ಆತಂಕ ಕಂಡು ಬಂದಿತು. ಅಲ್ಲದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಂಗಳವಾರ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ ಎಂಬ ಸುದ್ದಿಯಿಂದಾಗಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಕೆಲ ಸಮಯದ ನಂತರ ಜಿಲ್ಲಾಧಿಕಾರಿಗಳು ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟನೆ ಹೊರಡಿಸಿದ ಹಿನ್ನಲೆಯಲ್ಲಿ ಆತಂಕದಿಂದ ಅಭ್ಯರ್ಥಿಗಳು ನಿರಾಳರಾಗಿದ್ದು, ಮತದಾರರನ್ನು ಸೆಳೆಯಲು ಕೊನೆ ಕ್ಷಣದ ತಂತ್ರಗಾರಿಕೆಗಳಿಗೆ ಮೊರೆ ಹೋಗಿದ್ದಾರೆ.
ಚುನಾವಣಾ ಅಧಿಕಾರಿಗಳು-ಸಿಬ್ಬಂದಿಗಳಿಗೂ ಗೊಂದಲ:
ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ತಕ್ಷಣದ ತೀರ್ಮಾನಗಳಿಗೆ ತಕ್ಕಂತೆ ಅಧಿಕಾರಿಗಳು-ಸಿಬ್ಬಂದಿಗಳು ಬದಲಾವಣೆಗೊಂಡು ಗೊಂದಲದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಅಲ್ಲದೆ ಕೊರೋನಾ ೨ನೇ ಅಲೆ ಆತಂಕ ಸಹ ಅಧಿಕಾರಿಗಳು-ಸಿಬ್ಬಂದಿಗಳನ್ನು ಕಾಡುತ್ತಿದ್ದು, ಆದರೂ ಸಹ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
No comments:
Post a Comment