Monday, April 26, 2021

ಅಭ್ಯರ್ಥಿಗಳಿಂದ ಕೊನೆಯ ಕಸರತ್ತು : ಮನೆ ಮನೆ ಮತಯಾಚನೆ

ಭದ್ರಾವತಿ, ಏ. ೨೬: ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳಿಂದ ಸೋಮವಾರ ಮತಯಾಚನೆಯ ಕೊನೆಯ ಕಸರತ್ತು ನಡೆಯಿತು. ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಈ ನಡುವೆ ಭಾನುವಾರ ಸಂಜೆ ಬಹಿರಂಗ ಪ್ರಚಾರ ಮುಕ್ತಾಯಗೊಂಡಿತು. ಈ ಹಿನ್ನಲೆಯಲ್ಲಿ ಸೋಮವಾರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
      ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ  ಹೆಬ್ಬಂಡಿ ಮತ್ತು ಜೇಡಿಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೧ರಲ್ಲಿ ಒಟ್ಟು ೩೯೨೧ ಮತದಾರರಿದ್ದು,  ಒಟ್ಟು  ೪ ಮಂದಿ  ಕಣದಲ್ಲಿದ್ದಾರೆ.  ಬಿಜೆಪಿ ಪಕ್ಷದಿಂದ  ಬಿ.ಎಸ್ ಉಮಾವತಿ,  ಕಾಂಗ್ರೆಸ್ ಪಕ್ಷದಿಂದ ಮೀನಾಕ್ಷಿ , ಜೆಡಿಎಸ್ ಪಕ್ಷದಿಂದ ಟಿ. ರೇಖಾ ಹಾಗು ಒಬ್ಬರು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಅವಧಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪುತ್ರ ಎಂ.ಎ ಅಜಿತ್ ಜೆಡಿಎಸ್ ಪಕ್ಷದಿಂದ  ಆಯ್ಕೆಯಾಗಿದ್ದರು.
    ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ಲೋಯರ್‌ಹುತ್ತಾ ವ್ಯಾಪ್ತಿಯ ವಾರ್ಡ್ ನಂ.೨ರಲ್ಲಿ ಒಟ್ಟು ೩೩೧೮ ಮತದಾರರಿದ್ದು, ಈ ಬಾರಿ ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದಿಂದ ನಗರಸಭೆ ಮಾಜಿ ಸದಸ್ಯ ಎಸ್.ಪಿ ಮೋಹನ್‌ರಾವ್ ಈ ಬಾರಿ ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ಪಕ್ಷದಿಂದ ಒಕ್ಕಲಿಗ ಸಮುದಾಯದ ಕೆ. ಲತಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಕೆಜೆಪಿ ಪಕ್ಷದಿಂದ ಸಹಕಾರಿ ಧುರೀಣ ಕೆ.ಎನ್ ಭೈರಪ್ಪಗೌಡ ಆಯ್ಕೆಯಾಗಿದ್ದರು.
      ವರ್ತಕರು, ತಮಿಳರು, ಗೌಳಿಗರು, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಬಿ.ಎಚ್ ರಸ್ತೆ ಎಡ ಮತ್ತು ಮತ್ತು ಬಲಭಾಗ, ಚಾಮೇಗೌಡ ಏರಿಯಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩ರಲ್ಲಿ ಒಟ್ಟು ೪೩೬೭ ಮತದಾರರಿದ್ದು, ಈ ಬಾರಿ ಒಟ್ಟು ೯ ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಯುವ ಮೋರ್ಚಾ ಕಾರ್ಯದರ್ಶಿ ನಕುಲ್ ಜೆ ರೇವಣಕರ್ ಅವರನ್ನು, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಕ್ರಿಶ್ಚಿಯನ್ ಸಮುದಾಯದ ಜಾರ್ಚ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಪಕ್ಷದ ವತಿಯಿಂದ ನಗರಸಭೆ ಮಾಜಿ ಉಪಾಧ್ಯಕ್ಷೆ ಬಿ.ಕೆ ದೇವಿಕಾ ಹಾಗು ನಗರಸಭೆ ಮಾಜಿ ಸದಸ್ಯ ರಮೇಶ್ ದಂಪತಿ ಪುತ್ರ ಬಿ.ಆರ್ ಉಮೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯ ಯೋಗೀಶ್, ಮುಖಂಡ ಸ್ಟೀಲ್‌ಟೌನ್ ರಮೇಶ್, ನವೀನ್‌ಕುಮಾರ್ ಸೇರಿದಂತೆ ೬ ಮಂದಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಸ್. ಮೀನಾಕ್ಷಿ ಆಯ್ಕೆಯಾಗಿದ್ದರು.
     ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ,  ಗ್ರಾಮದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸೇರಿದಂತೆ ಇನ್ನಿತರ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಕನಕಮಂಟಪ ಮೈದಾನ ವ್ಯಾಪ್ತಿಯ ವಾರ್ಡ್ ನಂ. ೪ರಲ್ಲಿ ಒಟ್ಟು ೪೪೦೯ ಮತದಾರರಿದ್ದು, ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಶಾಸಕ ಬಿ ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಕಾಂಗ್ರೆಸ್ ಪಕ್ಷದಿಂದ, ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚನ್ನೇಶ್ ರವರ ಪತ್ನಿ ಅನುಪಮಾ, ಜೆಡಿಎಸ್ ಪಕ್ಷದ ಮುಖಂಡ ಹರೀಶ್ ರವರ ಪತ್ನಿ ಉಷಾ ಜೆಡಿಎಸ್ ಅಭ್ಯರ್ಥಿಯಾಗಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಗೀತಾ ಬಸವರಾಜ್ ಹಾಗು ಇಬ್ಬರು ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ ಕೆ.ಎನ್ ವಿದ್ಯಾಶ್ರೀ ಆಯ್ಕೆಯಾಗಿದ್ದರು. ಈ ಬಾರಿ ಈ ವಾರ್ಡ್  ಹೆಚ್ಚು ಗಮನ ಸೆಳೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
      ಮುಸ್ಲಿಂ, ಕುರುಬರು, ಮರಾಠಿಗರು ಹೆಚ್ಚಾಗಿರುವ ಕೋಟೆ ಏರಿಯಾ ವ್ಯಾಪ್ತಿಯ ವಾರ್ಡ್ ನಂ.೫ರಲ್ಲಿ ಒಟ್ಟು ೩೪೦೫ ಮತದಾರರಿದ್ದು, ಈ ಬಾರಿ ಒಟ್ಟು ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದು, ಬಿಜೆಪಿ ಪಕ್ಷದಿಂದ ಮುಖಂಡ ಬಿ.ಎಸ್ ನಾರಾಯಣಪ್ಪನವರ ಪತ್ನಿ ಬಿ. ಶಶಿಕಲಾ ಅವರನ್ನು ಕಣಕ್ಕಿಳಿಸಲಾಗಿದೆ. ಹಾಲಿ ನಗರಸಭಾ ಸದಸ್ಯ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್ ಅವರನ್ನು ಜೆಡಿಎಸ್  ಪಕ್ಷದಿಂದ ಕಣಕ್ಕಿಳಿಸಿದ್ದು, ಆಮ್ ಆದ್ಮಿ ಪಾರ್ಟಿಯಿಂದ ರೇಷ್ಮಬಾನು, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ನಸೀಮಾ ಖಾನಂ ಹಾಗು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರ್ತುಜಾ ಖಾನ್ ಆಯ್ಕೆಯಾಗಿದ್ದರು.
     ಶ್ರೀಮಂತ ವರ್ಗದವರು ಹೆಚ್ಚಾಗಿ  ವಾಸಿಸುತ್ತಿರುವ ಸಿದ್ಧಾರೂಢ ನಗರ ವ್ಯಾಪ್ತಿಯ ವಾರ್ಡ್ ನಂ.೬ರಲ್ಲಿ  ಒಟ್ಟು ೩೮೭೫ ಮತದಾರರಿದ್ದು, ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಚ್ ರಾಮಪ್ಪ ಪುತ್ರ, ಬಿಜೆಪಿ  ಮಂಡಲ   ಕಾರ್ಯದರ್ಶಿ ಕೆ.ಆರ್ ಸತೀಶ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ, ನಿವೃತ್ತ ಅಧಿಕಾರಿ ರಾಮಕೃಷ್ಣಪ್ಪ ಅವರ ಪುತ್ರ ಆರ್. ಶ್ರೇಯಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ, ತಾಲೂಕು  ಪಂಚಾಯಿತಿ ಮಾಜಿ ಅಧ್ಯಕ್ಷ  ಚನ್ನಪ್ಪ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗು  ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಡಿ. ರಾಜು  ಅವರ ಪತ್ನಿ ಸುಕನ್ಯಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ  ಶಿವರಾಜ್ ಆಯ್ಕೆಯಾಗಿದ್ದರು.
     ಬಹುತೇಕ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ದುರ್ಗಿಗುಡಿ ಹಾಗು ಖಲಂದರ್ ನಗರ ವ್ಯಾಪ್ತಿಯ ವಾರ್ಡ್ ನಂ.೭ರಲ್ಲಿ ಒಟ್ಟು ೩೭೦೩ ಮತದಾರರಿದ್ದು, ಈ ಬಾರಿ ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಹೆಚ್ಚು ಗಮನ ಸೆಳೆಯುತ್ತಿದೆ. ಹಾಲಿ ನಗರಸಭಾ ಸದಸ್ಯ ಶಿವರಾಜ್ ತಮ್ಮ ಪತ್ನಿ ಎಂ. ರೇಣುಕರನ್ನು, ಬಿಜೆಪಿ ಪಕ್ಷದಿಂದ  ಆಟೋ ಮೂರ್ತಿ ಅವರನ್ನು ಹಾಗು , ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ದೇವೇಂದ್ರ ಪಾಟೀಲ್ ಅವರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಟಿಪ್ಪು ಸುಲ್ತಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

No comments:

Post a Comment