ಭದ್ರಾವತಿ ನಗರಸಭೆ ವಾರ್ಡ್ ನಂ.೨೪ರ ಜೆಡಿಎಸ್ ಅಭ್ಯರ್ಥಿ ಕೋಟೇಶ್ವರರಾವ್ ಬೊಮ್ಮನಕಟ್ಟೆಯೊಂದರ ಮತಗಟ್ಟೆ ಬಳಿ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೭: ನಗರಸಭೆ ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಮಧ್ಯಾಹ್ನ ೧ ಗಂಟೆ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಶೇ.೪೦ರಷ್ಟು ಮತದಾನ ನಡೆದಿದ್ದು, ಕೊರೋನಾ ೨ನೇ ಅಲೆ ಭೀತಿ ನಡುವೆಯೂ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
ಕೊರೋನಾ ಭೀತಿಯಿಂದಾಗಿ ಮತದಾರರು ಮತಗಟ್ಟೆಗಳಿಗೆ ಬರಲು ನಿರಾಕರಿಸುವ ಸಾಧ್ಯತೆ ಹೆಚ್ಚು ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿತ್ತು. ಆದರೆ ಅಭ್ಯರ್ಥಿಗಳ ಆತಂಕ ಬೆಳಿಗ್ಗೆಯಿಂದಲೇ ದೂರವಾಯಿತು. ಬಹುತೇಕ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳ ಬಳಿ ಜನರು ಕೋವಿಡ್-೧೯ ಮಾರ್ಗ ಸೂಚಿಗಳನ್ನು ಮೀರಿ ಗುಂಪು ಸೇರಿರುವುದು ಕಂಡು ಬಂದಿತು. ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಯಾವುದೂ ಸಹ ಕಂಡು ಬರಲಿಲ್ಲ. ಈ ನಡುವೆ ಪೊಲೀಸರು ಆಗಾಗ ಗುಂಪು ಸೇರದಂತೆ ಎಚ್ಚರವಹಿಸಿರುವುದು ಸಹ ಕಂಡು ಬಂದಿತು.
ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ಮತದಾರರು ಕಾಗದನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಈ ನಡುವೆ ವಾರ್ಡ್ ನಂ.೨೧ರ ಮತದಾರರ ಪಟ್ಟಿಯಲ್ಲಿ ಅದಲು ಬದಲು ಆಗಿದ್ದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಅಶೋಕ್‌ಕುಮಾರ್ ಆರೋಪಿಸಿದರು. ಮತಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬರಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿತು.
ಗ್ರಾಮೀಣ ಪರಿಸರ ಹೊಂದಿರುವ ತಿಮ್ಲಾಪುರ-ದೊಡ್ಡಗೊಪ್ಪೇನ ಹಳ್ಳಿ ವ್ಯಾಪ್ತಿಯ ವಾರ್ಡ್ ನಂ.೨೩ರ ಮತದಾರರು ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ ಮತ್ತು ಬುಳ್ಳಾಪುರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೊಮ್ಮನಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೨೪ರ ಮತದಾರರು ಒಂದೇ ಮತಗಟ್ಟೆಯ ೪ ವಿಭಾಗಗಳಲ್ಲಿ ಮತಚಲಾಯಿಸಿದರು. ಹುಡ್ಕೋ-ಹೊಸಬುಳ್ಳಾಪುರ ವ್ಯಾಪ್ತಿಯ ವಾರ್ಡ್ ನಂ.೨೫ರ ಮತದಾರರು ೨ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.
ಮತಗಟ್ಟೆಗಳ ಬಳಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಕೆಲವು ಮತಗಟ್ಟೆಗಳ ಬಳಿ ಮತದಾರರಿಗೆ ಮೊಸರನ್ನ, ಚಿತ್ರನ್ನ, ಮಜ್ಜಿಗೆ, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುತ್ತಿರುವುದು ಕಂಡು ಬಂದಿತು.
ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.
No comments:
Post a Comment