ಭದ್ರಾವತಿ ಹಳೇನಗರ ಭೂತನಗುಡಿ ವ್ಯಾಪ್ತಿಯ ನಗರಸಭೆ ವಾರ್ಡ್ ನಂ.೧೩ರ ಮತಗಟ್ಟೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತದಾನ ಮಾಡಿದರು.
ಭದ್ರಾವತಿ, ಏ. ೨೭: ಮತದಾನ ಮುಗಿದ ತಕ್ಷಣ ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಲೆಕ್ಕಚಾರ, ಕೆಲವು ಅಭ್ಯರ್ಥಿಗಳಿಗೆ ಸೋಲಿನ ಭೀತಿ, ಮತ್ತೆ ಕೆಲವರಿಗೆ ಗೆಲುವಿನ ಉತ್ಸಾಹ ಕಂಡು ಬರುತ್ತಿದೆ.
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು, ಅಪ್ಪಾಜಿಯವರ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಹಾಗು ಅನುಕಂಪದ ಅಲೆಯಿಂದ ಈ ಬಾರಿ ಸಹ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಜೆಡಿಎಸ್ ಹೊಂದಿದೆ. ಮತ್ತೊಂದೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿವೃದ್ಧಿ ಕಾರ್ಯಗಳು ಮತ್ತು ವರ್ಚಸ್ಸು ಮತಗಳಾಗಿ ಪರಿವರ್ತನೆಗೊಂಡಿವೆ. ಈ ಹಿನ್ನಲೆಯಲ್ಲಿ ಈ ಬಾರಿ ನಗರಸಭೆ ಅಧಿಕಾರ ಹಿಡಿಯುವ ತವಕ ಕಾಂಗ್ರೆಸ್ ಹೊಂದಿದೆ.
ಇವೆಲ್ಲದರ ನಡುವೆ ಬಿಜೆಪಿ ಸುಮಾರು ೨ ತಿಂಗಳ ಹಿಂದೆ ಕನಕಮಂಟಪ ಮೈದಾನದಲ್ಲಿ ತಾಲೂಕು ಮಟ್ಟದ ಹೊನಲು ಬೆಳಗಿನ ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ಘಟನೆಯನ್ನು ಸವಾಲಾಗಿ ತೆಗೆದುಕೊಂಡು ಸಂಘಟನಾತ್ಮಕವಾಗಿ ಈ ಬಾರಿ ಚುನಾವಣೆಯನ್ನು ಎದುರಿಸಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಚುನಾವಣೆ ನೇತೃತ್ವ ವಹಿಸಿರುವ ಹಿನ್ನಲೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿದ್ದ ಕೆಲವು ಅಭ್ಯರ್ಥಿಗಳಲ್ಲಿ ಸೋಲಿನ ಭೀತಿ ಎದ್ದು ಕಾಣುತ್ತಿದ್ದು, ಬಂಡಾಯ ಅಭ್ಯರ್ಥಿಗಳು ಮತಗಳನ್ನು ಕಸಿದಿರುವ ಭೀತಿ ಕಾಡುತ್ತಿದೆ. ಮಾತೃಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿರುವ ಕೆಲವು ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಕಂಡು ಬರುತ್ತಿದೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೩೨ರ ಜೆಡಿಯು ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು.
No comments:
Post a Comment