Tuesday, April 27, 2021

ಕೊರೋನ ೨ನೇ ಅಲೆ ಭೀತಿ ನಡುವೆಯೂ ಶೇ.೬೦ಕ್ಕೂ ಹೆಚ್ಚು ಮತದಾನ

ಭದ್ರಾವತಿ ನಗರಸಭೆ ಚುನಾವಣೆ ಮತದಾನ ಮಂಗಳವಾರ ನಡೆದಿದ್ದು, ಮತಗಟ್ಟೆಗಳ ಬಳಿ ಕೋವಿಡ್ ಮಾರ್ಗಸೂಚಿಗಳನ್ನು ಮೀರಿ ಗುಂಪು ಸೇರಿರುವುದು.
     ಭದ್ರಾವತಿ, ಏ. ೨೭: ಮಂಗಳವಾರ ನಡೆದ ನಗರಸಭೆ ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಸಂಜೆ ೫ ಗಂಟೆ ವೇಳೆಗೆ ಶೇ.೬೦.೫೫ರಷ್ಟು ಮತದಾನ ನಡೆದಿದ್ದು, ಕೊರೋನಾ ೨ನೇ ಅಲೆ ಭೀತಿ ನಡುವೆಯೂ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
     ಕೊರೋನಾ ಭೀತಿಯಿಂದಾಗಿ ಮತದಾರರು ಮತಗಟ್ಟೆಗಳಿಗೆ ಬರಲು ನಿರಾಕರಿಸುವ ಸಾಧ್ಯತೆ ಹೆಚ್ಚು ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿತ್ತು. ಆದರೆ ಅಭ್ಯರ್ಥಿಗಳ ಆತಂಕ ಬೆಳಿಗ್ಗೆಯಿಂದಲೇ ದೂರವಾಯಿತು. ಬಹುತೇಕ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. 
    ಮಧ್ಯಾಹ್ನ ೧ ಗಂಟೆ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಶೇ.೩೬.೩೨ರಷ್ಟು ಹಾಗು ೩ ಗಂಟೆ ವೇಳೆಗೆ ಶೇ.೪೭.೦೧ರಷ್ಟು ಮತದಾನ ನಡೆದಿದ್ದು, ಸಂಜೆ ೫ ಗಂಟೆ ವೇಳೆಗೆ ಶೇ.೬೦ಕ್ಕೆ ಏರಿಕೆಯಾಗಿದೆ. ಕೆಲವು ವಾರ್ಡ್‌ಗಳಲ್ಲಿ ಶೇ.೭೦ಕ್ಕೂ ಹೆಚ್ಚು ಮತದಾನ ನಡೆದಿದೆ. ಇದರಿಂದಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದು ಸ್ಪಷ್ಟವಾಗಿದೆ.
    ಸಂಜೆ ೫ರ ವೇಳೆಗೆ ವಾರ್ಡ್ ನಂ.೧ರಲ್ಲಿ ೬೩.೯೬, ೨ರಲ್ಲಿ ೬೪.೪೧, ೩ರಲ್ಲಿ ೫೮.೬೧, ೪ರಲ್ಲಿ ೫೯.೨೯, ೫ರಲ್ಲಿ ೬೨.೨೪, ೬ರಲ್ಲಿ ೫೭.೪೭, ೭ರಲ್ಲಿ ೪೭.೪೮, ೮ರಲ್ಲಿ ೫೯.೭೯, ೯ರಲ್ಲಿ ೬೨.೪೯, ೧೦ರಲ್ಲಿ ೫೭.೫೪, ೧೧ರಲ್ಲಿ ೬೦.೪೫, ೧೨ರಲ್ಲಿ ೬೦.೯೮, ೧೩ರಲ್ಲಿ ೫೭.೧೧, ೧೪ರಲ್ಲಿ ೬೯.೪೪, ೧೫ರಲ್ಲಿ ೬೫.೦೮, ೧೬ರಲ್ಲಿ ೬೧.೫೬, ೧೭ರಲ್ಲಿ ೬೬.೯೯, ೧೮ರಲ್ಲಿ ೭೨.೮೫, ೧೯ರಲ್ಲಿ ೩೮.೭೮, ೨೦ರಲ್ಲಿ ೬೩.೬೫, ೨೧ರಲ್ಲಿ ೫೭.೮೭, ೨೨ರಲ್ಲಿ ೬೩.೦೩, ೨೩ರಲ್ಲಿ ೭೧.೦೨, ೨೪ರಲ್ಲಿ ೭೦.೬೫, ೨೫ರಲ್ಲಿ ೬೩.೨೪, ೨೬ರಲ್ಲಿ ೪೫.೦೪, ೨೭ರಲ್ಲಿ ೫೮.೮೪, ೨೮ರಲ್ಲಿ ೫೩.೪೧, ೩೦ರಲ್ಲಿ ೭೪, ೩೧ರಲ್ಲಿ ೬೩.೫೬, ೩೨ರಲ್ಲಿ ೫೪.೨೨, ೩೩ರಲ್ಲಿ ೫೮.೮೫, ೩೪ರಲ್ಲಿ ೪೮.೨೨ ಮತ್ತು ೩೫ರಲ್ಲಿ ೬೮.೦೯ರಷ್ಟು ಮತದಾನ ನಡೆದಿದೆ.
    ಕೆಲವು ಮತಗಟ್ಟೆಗಳ ಬಳಿ ಜನರು ಕೋವಿಡ್-೧೯ ಮಾರ್ಗ ಸೂಚಿಗಳನ್ನು ಮೀರಿ ಗುಂಪು ಸೇರಿರುವುದು ಕಂಡು ಬಂದಿತು.  ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಯಾವುದೂ ಸಹ ಕಂಡು ಬರಲಿಲ್ಲ. ಈ ನಡುವೆ ಪೊಲೀಸರು ಆಗಾಗ ಗುಂಪು ಸೇರದಂತೆ ಎಚ್ಚರವಹಿಸಿರುವುದು ಸಹ ಕಂಡು ಬಂದಿತು.
    ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ಮತದಾರರು ಕಾಗದನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಈ ನಡುವೆ ವಾರ್ಡ್ ನಂ.೨೧ರ ಮತದಾರರ ಪಟ್ಟಿಯಲ್ಲಿ ಅದಲು ಬದಲು ಆಗಿದ್ದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಅಶೋಕ್‌ಕುಮಾರ್ ಆರೋಪಿಸಿದರು. ಮತಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬರಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿತು.
    ಗ್ರಾಮೀಣ ಪರಿಸರ ಹೊಂದಿರುವ ತಿಮ್ಲಾಪುರ-ದೊಡ್ಡಗೊಪ್ಪೇನ ಹಳ್ಳಿ ವ್ಯಾಪ್ತಿಯ ವಾರ್ಡ್ ನಂ.೨೩ರ ಮತದಾರರು ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ ಮತ್ತು ಬುಳ್ಳಾಪುರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೊಮ್ಮನಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೨೪ರ ಮತದಾರರು ಒಂದೇ ಮತಗಟ್ಟೆಯ ೪ ವಿಭಾಗಗಳಲ್ಲಿ ಮತಚಲಾಯಿಸಿದರು. ಹುಡ್ಕೋ-ಹೊಸಬುಳ್ಳಾಪುರ ವ್ಯಾಪ್ತಿಯ ವಾರ್ಡ್ ನಂ.೨೫ರ ಮತದಾರರು ೨ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.
    ಮತಗಟ್ಟೆಗಳ ಬಳಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಕೆಲವು ಮತಗಟ್ಟೆಗಳ ಬಳಿ ಮತದಾರರಿಗೆ ಮೊಸರನ್ನ, ಚಿತ್ರನ್ನ, ಮಜ್ಜಿಗೆ, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುತ್ತಿರುವುದು ಕಂಡು ಬಂದಿತು.
ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ:
    ಬಹುತೇಕ ವಾರ್ಡ್‌ಗಳಲ್ಲಿ ಈ ಬಾರಿ ಸಹ ಈ ಹಿಂದಿನಂತೆ ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ ಇರುವುದು ಕಂಡು ಬಂದಿತು. ಈ ನಡುವೆ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿ ಸಹ ಸಮರ್ಥವಾಗಿ ಪೈಪೋಟಿ ನೀಡಿರುವುದು ಕಂಡು ಬಂದಿದೆ. ಕಳೆದ ಬಾರಿ ಜೆಡಿಎಸ್ ಅತಿಹೆಚ್ಚು ೨೩ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಕಾಂಗ್ರೆಸ್ ಕೇವಲ ೬ ಸ್ಥಾನಗಳನ್ನು, ಬಿಜೆಪಿ ೨ ಸ್ಥಾನಗಳನ್ನು ಹಾಗು ಕೆಜೆಪಿ ೨ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದವು. ಉಳಿದಂತೆ ೨ ಸ್ಥಾನಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದರು.  

No comments:

Post a Comment