Wednesday, April 7, 2021

ಭದ್ರಾವತಿ ನಗರಕ್ಕೆ ನಶಿಸಿಹೋಗುತ್ತಿರುವ ಜೀವವೈವಿಧ್ಯತೆ ಕುರಿತು ಕನ್ನಡದಲ್ಲಿ ಮಾಹಿತಿ ಪುಸ್ತಕ ವಿತರಣೆ

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ

ಭದ್ರಾವತಿಯಲ್ಲಿ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು.
   ಭದ್ರಾವತಿ, ಏ. ೭: ವಿಶೇಷವಾಗಿ ಭದ್ರಾವತಿ ನಗರವನ್ನು ಗಮನದಲ್ಲಿಟ್ಟುಕೊಂಡು ನಶಿಸಿ ಹೋಗುತ್ತಿರುವ ಜೀವವೈವಿಧ್ಯತೆಗಳನ್ನು ಗುರುತಿಸಿ ಸುಮಾರು ೫೦ ಪುಟಗಳಷ್ಟು ಮಾಹಿತಿಯನ್ನೊಳಗೊಂಡಿರುವ ಪುಸ್ತಕವನ್ನು ಕನ್ನಡದಲ್ಲಿ ಮುದ್ರಿಸಿ ವಿತರಿಸಲಾಗುವುದು. ಈ ಪುಸ್ತಕದಲ್ಲಿನ ಮಾಹಿತಿಗಳನ್ನು ತಿಳಿದುಕೊಂಡು ಅನುಷ್ಠಾನಗೊಳಿಸಿದರೆ ಸಾಕು. ಇಲ್ಲಿನ ಜೀವವೈವಿಧ್ಯತೆ ಉಳಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
     ಭದ್ರಾವತಿ ನಗರ ಒಂದು ಕಾಲದಲ್ಲಿ ರಾಷ್ಟ್ರ, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವುದು ಸರಿಯಷ್ಟೆ ಆದರೆ ಪರಿಸರ, ಜೀವ ವೈವಿಧ್ಯತೆ ಸಾಕಷ್ಟು ನಶಿಸಿ ಹೋಗಿದೆ. ಈ ಕುರಿತು ಈಗಾಗಲೇ ವರದಿಯನ್ನು ಸಿದ್ದಪಡಿಸಲಾಗಿದೆ ಎಂದರು.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ನಗರಸಭೆ ವ್ಯಾಪ್ತಿಯ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ನಗರಸಭೆ ಹಾಗೂ ಎರಡು ಕಾರ್ಖಾನೆಗಳ ಆಡಳಿತ ಮಂಡಳಿಗಳು, ಸಾಮಾಜಿ ಅರಣ್ಯ ಸಮಿತಿಗಳು ಕೈಜೋಡಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಸಸಿಗಳನ್ನು ಬೆಳೆಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಸುಮಾರು ೧ ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿತ್ತು. ಆದರೆ ಸುಮಾರು ೮೦ ರಿಂದ ೯೦ ಸಾವಿರದಷ್ಟು ಸಸಿಗಳನ್ನು ನೆಡಲಾಗಿದೆ. ಈ ಉದ್ದೇಶಕ್ಕಾಗಿಯೇ ಕೊರೋನಾ ಸಂದರ್ಭದಲ್ಲಿಯೂ ಒಟ್ಟು ಸುಮಾರು ೬ ಲಕ್ಷ ಸಸಿಗಳನ್ನು ಹಾಗು ಸುಮಾರು ೩ ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ ಬೆಳೆಯಾಗಿದೆ. ಮುಂದಿನ ವರ್ಷದಲ್ಲಿ ರಾಜ್ಯಾದ್ಯಂತ ಸುಮಾರು ೫೦೦ ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
    ನಮ್ಮ ಪರಿಸರದಲ್ಲಿ ಜೀವವೈವಿಧ್ಯತೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜೀವವೈವಿಧ್ಯ ಮಂಡಳಿ ಮುಂದಾಗಿದ್ದು, ೨೦೦೩-೦೪ರಲ್ಲಿ ರೂಪುಗೊಂಡ ಮಂಡಳಿ ಕಾಯ್ದೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.
    ರಾಜ್ಯದ ಎಲ್ಲೆಡೆ ನಗರ ಹಾಗು ಗ್ರಾಮಾಂತರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಂಡಳಿಯ ಸಮಿತಿಗಳನ್ನು ರಚಿಸಲಾಗಿದ್ದು, ಅದರಲ್ಲೂ ಗ್ರಾಮ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳಿಗೆ ಹೆಚ್ಚಿನ ಬಲ ನೀಡಬೇಕಾಗಿದೆ. ಜೀವವಿವೈಧ್ಯತೆ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವುದು ಈ ಗ್ರಾಮ ಸಮಿತಿಗಳಾಗಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ ಎಂದರು.
   ಈಗಾಗಲೇ ಬಹುತೇಕ ಅರಣ್ಯ ನಾಶವಾಗಿದ್ದು, ಈ ಬಗ್ಗೆ ಚಿಂತಿಸುವ ಬದಲು ಉಳಿದಿರುವ ಅರಣ್ಯವನ್ನು ಉಳಿಸಿಕೊಳ್ಳುವ ನಿಟ್ಟಿಲ್ಲಿ ಹೆಚ್ಚು ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪರೂಪದ ಔಷಧಿ ಗಿಡಗಳಿದ್ದು, ಇವುಗಳಲ್ಲಿ ಬಹುತೇಕ ನಶಿಸಿ ಹೋಗಿವೆ. ನಶಿಸಿ ಹೋಗುತ್ತಿರುವ ಔಷಧಿ ಗಿಡಗಳನ್ನು ರಂರಕ್ಷಿಸುವ ನಿಟ್ಟಿನಲ್ಲಿ ಹಾಗು ನಶಿಸಿ ಹೋಗುತ್ತಿರುವ ಕೆರೆಗಳು, ನದಿ ಮೂಲಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಂಡಳಿ ಮುಂದಾಗಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಾಮನಗಟ್ಟಿ ಉಪಸ್ಥಿತರಿದ್ದರು.

No comments:

Post a Comment