Friday, April 30, 2021

ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲು : ಪ್ರತಿಷ್ಠೆ ಮೆರೆದ ಶಾಸಕ ಬಿ.ಕೆ ಸಂಗಮೇಶ್ವರ್

ಕಾಂಗ್ರೆಸ್-೧೮, ಜೆಡಿಎಸ್-೧೧, ಬಿಜೆಪಿ-೪ ಹಾಗು ಪಕ್ಷೇತರ-೧ ಅಭ್ಯರ್ಥಿಗಳ ಗೆಲುವು

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಏ. ೩೦: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ಸ್ಥಾನಗಳೊಂದಿಗೆ ಬಹುಮತ ಪಡೆದುಕೊಂಡಿದೆ.
    ನಗರಸಭೆ ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಉಳಿದ ೩೪ ವಾರ್ಡ್‌ಗಳ ಪೈಕಿ ೧೮-ಕಾಂಗ್ರೆಸ್, ೧೧-ಜೆಡಿಎಸ್, ೪-ಬಿಜೆಪಿ ಹಾಗು ೧-ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೧ರಲ್ಲಿ ಪಡಿತರ ವಿತರಕ ಪ್ರಕಾಶ್ ತಮ್ಮ ಪತ್ನಿ ರೇಖಾ. ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೨ನೇ ವಾರ್ಡ್‌ನಲ್ಲಿ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್‌ರವರು ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಸೋಲು ಅನುಭವಿಸಿದ್ದಾರೆ. ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ೩ನೇ ವಾರ್ಡ್‌ನಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜಾರ್ಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೪ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ವಿರುದ್ಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ತಮ್ಮ ಪತ್ನಿ ಅನುಪಮಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್‌ನಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಬಿ. ಶಶಿಕಲಾ ಬಿ.ಎಸ್ ನಾರಾಯಣಪ್ಪ ಗೆಲುವು ಸಾಧಿಸಿದ್ದಾರೆ. ೬ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಮೊದಲ ಬಾರಿಗೆ ಆಯ್ಕೆಯಾಗಿದ್ದು, ೭ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ೮ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ ಗೆಲುವು ಸಾಧಿಸಿದ್ದಾರೆ. ೯ನೇ ವಾರ್ಡ್‌ನಲ್ಲಿ ೨ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಆಯ್ಕೆಯಾಗಿದ್ದಾರೆ.
      ೧೦ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಮಲ್ಲೇಶ್ ಗೆಲುವು ಸಾಧಿಸಿದ್ದು, ೧೧ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಮಣಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ವಿರುದ್ದ ಗೆಲುವು ಸಾಧಿಸಿ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೨ನೇ ವಾರ್ಡ್‌ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದು, ಕಳೆದ ಬಾರಿ ಇವರ ಪತ್ನಿ ರೇಣುಕಾ ಸುದೀಪ್ ಆಯ್ಕೆಯಾಗಿದ್ದರು. ವಾರ್ಡ್ ನಂ.೧೪ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್ ಕಾಂಗ್ರೆಸ್ ಸ್ಪರ್ಧಿಸಿ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೫ನೇ ವಾರ್ಡ್‌ನಲ್ಲಿ ಮಂಜುಳ ಸುಬ್ಬಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೬ನೇ ವಾರ್ಡ್‌ನಲ್ಲಿ ಹಿರಿಯ ಬಿಜೆಪಿ ಮುಖಂಡ, ಸೂಡಾ ಸದಸ್ಯ ವಿ. ಕದಿರೇಶ್ ೫ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ೧೮ನೇ ವಾರ್ಡ್‌ನಲ್ಲಿ ಮಹಮದ್ ಯೂಸೂಫ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೯ರಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೇಕೊಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
    ವಾರ್ಡ್ ನಂ.೨೦ರಲ್ಲಿ ಜೆಡಿಎಸ್ ಮುಖಂಡ, ಕೇಬಲ್ ಸುರೇಶ್ ತಮ್ಮ ಪತ್ನಿ ಎಸ್. ಜಯಶೀಲ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೧ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಅಶೋಕ್‌ಕುಮಾರ್ ತಮ್ಮ ತಾಯಿ ವಿಜಯ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ  ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ಸೋಲು ಅನುಭವಿಸಿದ್ದಾರೆ. ವಾರ್ಡ್‌ನಲ್ಲಿ ೨೨ರಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ೨ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೩ರಲ್ಲಿ ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ತಮ್ಮ ಪತ್ನಿ ಕೆ.ಪಿ ಪ್ರೇಮಾರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಡ್ ನಂ.೨೪ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೋಟೇಶ್ವರ ರಾವ್ ಗೆಲುವು ಸಾಧಿಸಿದ್ದಾರೆ. ಇದೆ ರೀತಿ ವಾರ್ಡ್ ನಂ.೨೫ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಉದಯಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ತಮ್ಮ ಪತ್ನಿ ಬಿ.ಪಿ ಸರ್ವಮಂಗಳ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೭ರಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗುಣಶೇಖರ್ ಈ ಬಾರಿ ತಮ್ಮ ಪತ್ನಿ ರೂಪಾವತಿ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೮ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
    ವಾರ್ಡ್ ೩೦ರಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೧ರಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ದಿಲೀಪ್ ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೨ರಲ್ಲಿ ಅಪ್ಪಾಜಿ ಬೆಂಬಲಿಗ ಉಮೇಶ್ ತಮ್ಮ ಪತ್ನಿ ಸವಿತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
     ವಾರ್ಡ್ ನಂ.೩೩ರಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿ ಆರ್. ಮೋಹನ್ ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ವಾರ್ಡ್ ನಂ.೩೪ರಲ್ಲಿ ಮೊದಲ ಬಾರಿಗೆ ಒಕ್ಕಲಿಗ ಸಮಾಜದ  ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೩೫ರಲ್ಲಿ ಮಾಜಿ ನಗರಸಭಾ ಸದಸ್ಯ ಗಂಗಾಧರ್ ತಮ್ಮ ಸೊಸೆ ಶೃತಿ ವಸಂತಕುಮಾರ್ ಅರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
        ಅಪ್ಪ-ಮಕ್ಕಳ ಗೆಲುವು:
      ಈ ಬಾರಿ ನಗರಸಭೆ ಚುನಾವಣೆ ಫಲಿತಾಂಶದ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ೨೨ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್ ವಾರ್ಡ್ ನಂ.೧೬ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ವಾರ್ಡ್ ನಂ.೧೨ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
      ಸೊಸೆ ವಿರುದ್ದ ಗೆಲುವು ಸಾಧಿಸಿದ ಅತ್ತೆ:
    ವಾರ್ಡ್ ನಂ.೨೧ರಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಾರವರು ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ವಿಜಯಾರವರು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೨ ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
    ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅಲ್ಲದೆ ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕರು ಸಂಘಟಿತವಾಗಿ ನಡೆಸಿದ ಪ್ರಯತ್ನದ ಫಲವಾಗಿ ೨ ಸ್ಥಾನ ಹೆಚ್ಚಳವಾಗಿದೆ ಎಂದರೆ ತಪ್ಪಾಗಲಾರದು.
    ಛಲವಾದಿ ಸಮಾಜದ ೪ ಮಂದಿ ಆಯ್ಕೆ : 
ಈ ಬಾರಿ ಚುನಾವಣೆಯಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ವಾರ್ಡ್ ನಂ.೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೫ರಲ್ಲಿ ಛಲವಾದಿ ಸಮಾಜದ ಮುಖಂಡ ಉದಯಕುಮಾರ್ ಮೊದಲ ಬಾರಿಗೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಪತ್ನಿ ಪ್ರೇಮಾ ವಾರ್ಡ್ ನಂ.೨೩ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

     ಸೋಲು ಅನುಭವಿಸಿದ ಮಾಜಿ ಅಧ್ಯಕ್ಷರು:
   ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ, ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ವಾರ್ಡ್ ನಂ.೧೮ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕುರುಬ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೫ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಇದೆ ರೀತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವಾರ್ಡ್ ನಂ.೩೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

No comments:

Post a Comment