ಭದ್ರಾವತಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ ಚನ್ನೇಶ್ ಶನಿವಾರ ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಭದ್ರಾವತಿ, ಏ. ೨೪: ರಾಜ್ಯ ಸರ್ಕಾರ ಒಂದೆಡೆ ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಘೋಷಿಸಿದ್ದು, ಈ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತರಳಿ ಮತಯಾಚನೆ ನಡೆಸಿದರು.
ಬಹುತೇಕ ಗ್ರಾಮೀಣ ಪರಿಸರ ಹೊಂದಿರುವ ಭಂಡಾರಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩೫ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೫ ಜನ ಕಣದಲ್ಲಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಈ ವಾರ್ಡ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಗಂಗಾಧರ್‌ರವರು ತಮ್ಮ ಸೊಸೆ ಶೃತಿ ವಸಂತ್‌ಕುಮಾರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಹಿರಿಯ ಮಹಿಳೆ ನಿಂಗಮ್ಮರನ್ನು ಕಣಕ್ಕಿಳಿಸಲಾಗಿದೆ. ಇದೆ ರೀತಿ ಬಿಜೆಪಿ ಪಕ್ಷದಿಂದ ಲಕ್ಷ್ಮಮ್ಮ ನರಸಿಂಹಗೌಡರನ್ನು ಕಣಕ್ಕಿಳಿಸಲಾಗಿದೆ. ಈ ಇಬ್ಬರು ರಾಜಕೀಯಕ್ಕೆ ಹೊಸಬರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯೆ ಸುಧಾ ಶಿವಪ್ಪ ಸೇರಿದಂತೆ ಇಬ್ಬರು ಸ್ಪರ್ಧಿಗಳಿದ್ದಾರೆ.
ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಜೆ. ಭಾಗ್ಯ ಆಯ್ಕೆಯಾಗಿದ್ದರು. ಈ ಬಾರಿ ಸಹ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಒಕ್ಕಲಿಗರು ಹೆಚ್ಚಾಗಿರುವ ಅಪ್ಪರ್ ಹುತ್ತಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ೩೪ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೪ ಜನ ಕಣದಲ್ಲಿದ್ದಾರೆ. ಮೂಲತಃ ಜೆಡಿಎಸ್‌ನವರಾದ ವಾರ್ಡ್‌ನಲ್ಲಿ ಚಿರಪರಿಚಿತರಾಗಿರುವ ಭಾಗ್ಯಮ್ಮ ಮಂಜುನಾಥ್‌ರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಹಿಂದೂಪರ ಹಾಗು ವಿವಿಧ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಲತಾ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹಾಗು ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಶ್ಯಾಮಲ ಸತ್ಯಣ್ಣರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.
ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಜೆಡಿಎಸ್ ಪಕ್ಷದಿಂದ ಎಚ್.ಬಿ ರವಿಕುಮಾರ್ ಆಯ್ಕೆಯಾಗಿದ್ದರು. ೩ ಪಕ್ಷಗಳ ಅಭ್ಯರ್ಥಿಗಳ ನಡೆವೆಯೂ ಪ್ರಬಲ ಪೈಪೋಟಿ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಇಲ್ಲೂ ಸಹ ಒಕ್ಕಲಿಗರು ಹೆಚ್ಚಾಗಿರುವ ಹುತ್ತಾಕಾಲೋನಿ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೩೩ರಲ್ಲಿ ಒಟ್ಟು ೪,೩೨೦ ಮತದಾರರಿದ್ದು, ೬ ಜನ ಕಣದಲ್ಲಿದ್ದಾರೆ. ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸಮಾಜ ಸೇವಕ ಬಿ.ವಿ ಕೃಷ್ಣರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಲಿ ನಗರಸಭಾ ಸದಸ್ಯ ಎಚ್.ಬಿ ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಶ್ರೀಧರ ಗೌಡ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯೆ ಶಶಿಕಲಾ ಸೇರಿದಂತೆ ೩ ಮಂದಿ ಸ್ಪರ್ಧೆಯಲ್ಲಿದ್ದಾರೆ.
ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಂ.ಎಸ್ ಸುಧಾಮಣಿ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಭಗೀರಥ ಗುರುಪೀಠದ ಶ್ರೀಗಳಿಂದ ಆಶೀರ್ವಾದ:
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ ಚನ್ನೇಶ್ ಶನಿವಾರ ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಉಪ್ಪಾರ ಸಮಾಜ ಅಧಿಕೃತವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೆ ಗಿರೀಶ್ ಉಪ್ಪಾರ ಅವರ ನೇತೃತ್ವದಲ್ಲಿ ಹೊಸದುರ್ಗಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದರು.
No comments:
Post a Comment