Saturday, May 1, 2021

ಅಪ್ಪಾಜಿ ನಿಧನದ ನಂತರ ಜೆಡಿಎಸ್ ನಿರ್ನಾಮ ಎಂದವರಿಗೆ ನಗರಸಭೆ ಚುನಾವಣೆ ಮೂಲಕ ತಕ್ಕ ಉತ್ತರ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಭದ್ರಾವತಿ: ನಮ್ಮ ನಾಯಕರಾದ ಅಪ್ಪಾಜಿಯವರು ನಿಧನ ಹೊಂದಿದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನಿರ್ನಾಮವಾಗಿದೆ ಎಂದು ಕೊಂಡವರಿಗೆ ಮತದಾರರು ನಗರಸಭೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡಿದ್ದಾರೆಂದು ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ತಿಳಿಸಿದರು.
    ಅವರು ಶನಿವಾರ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಕೆಲವು ಗೊಂದಲಗಳಿಂದಾಗಿ ಈ  ಬಾರಿ ಜೆಡಿಎಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಆದರೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿದೆ. ಈ ಹಿನ್ನಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಿರುವ ಮುಖಂಡರು, ಕಾರ್ಯಕರ್ತರು ಹಾಗು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಕೋವಿಡ್-೧೯ ಹಿನ್ನಲೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲಿ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಪ್ರಚಾರ ಮಾಡಲು ಸಾಧ್ಯವಾಯಿತು. ಪ್ರಚಾರ ನಡೆಸಿದ ವಾರ್ಡ್‌ಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಸ್ತುತ ನಗರಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆಯಲು ವಿಫಲವಾಗಿರಬಹುದು. ಆದರೆ ಮತ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಸಮಾನವಾಗಿ ಪೈಪೋಟಿ ನೀಡಿದೆ. ಸ್ಪರ್ಧೆಗೆ ಅವಕಾಶ ನೀಡುವ ಸಂದರ್ಭದಲ್ಲಿ ಕೆಲವೊಂದು ಗೊಂದಲಗಳಿಂದಾಗಿ ಸ್ಪರ್ಧೆಗೆ ಅವಕಾಶ ಸಿಗದವರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಈ ಬೆಳೆವಣಿಗೆಗಳು ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಲಾಗುವುದು ಎಂದರು.
    ಈ ಹಿಂದೆ ಪಕ್ಷದ ಸ್ಥಳೀಯ ಮುಖಂಡರಲ್ಲಿ ಕೆಲವೊಂದು ಗೊಂದಲಗಳಿದ್ದವು. ಇದೀಗ ಎಲ್ಲಾ ಗೊಂದಲಗಳು ದೂರವಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಅವರದೇ ಆದ ರೀತಿಯಲ್ಲಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ೧೧ ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಮೈಲಾರಪ್ಪ, ಲೋಕೇಶ್ವರ್‌ರಾವ್, ಲಕ್ಷ್ಮೀ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment