ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಎ.ಕೆ ಕಾಲೋನಿಯಲ್ಲಿ ಒಂದೇ ದಿನ ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಈ ಕಾಲೋನಿಯನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಮೇ. ೨೮: ಲಾಕ್‌ಡೌನ್ ೨ನೇ ಅವಧಿಯಲ್ಲಿಯೂ ಸಹ ತಾಲೂಕಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ೧೨೪ ಸೋಂಕು ಪತ್ತೆಯಾಗಿದೆ. ಒಂದೇ ದಿನ ೯ ಜನ ಬಲಿಯಾಗಿದ್ದು, ನಗರ ಹಾಗು ಗ್ರಾಮಾಂತರ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಒಟ್ಟು ೩೯೨ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೧೨೪ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೨೬ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೪೭೩೫ ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ೪೦೯೩ ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನ ೯ ಮಂದಿ ಬಲಿಯಾಗಿದ್ದು, ಇದುವರೆಗೂ ೧೧೭ ಮಂದಿ ಮೃತಪಟ್ಟಿದ್ದಾರೆ.
೨೮೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು ೩೯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಒಟ್ಟು ೫೨ ಕಂಟೈನ್‌ಮೆಂಟ್ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೯ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
ಬಾರಂದೂರು ಎ.ಕೆ ಕಾಲೋನಿ ಸೀಲ್‌ಡೌನ್:
ತಾಲೂಕಿನ ಬಾರಂದೂರು ಗ್ರಾಮದ ಎ.ಕೆ ಕಾಲೋನಿಯಲ್ಲಿ ಒಂದೇ ದಿನ ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಈ ಕಾಲೋನಿಯನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
ಕಳೆದ ೩-೪ ದಿನಗಳ ಹಿಂದೆ ಈ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ವ್ಯಕ್ತಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಸುಮಾರು ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆ ವತಿಯಿಂದ ರೋಗ ನಿರೋಧಕ ಔಷಧಿ ಸಿಂಪಡಿಸಲಾಗಿದ್ದು, ನಿವಾಸಿಗಳು ಸೋಂಕು ಕುರಿತು ಜಾಗೃತಿ ಮೂಡಿಸುವ ಮೂಲಕ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಾಲೋನಿಯ ಮುಖ್ಯ ರಸ್ತೆಯನ್ನು ಬ್ಯಾರಿಗೇಡ್ ಮೂಲಕ ಸಂಪೂರ್ಣ ಬಂದ್ ಮಾಡಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
No comments:
Post a Comment