ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕೈಗೊಂಡಿರುವ ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯಕ್ಕೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಪರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಚಾಲನೆ ನೀಡಿದರು.
ಭದ್ರಾವತಿ, ಮೇ. ೨೮: ದೇಶ ಸೇವೆಯೊಂದಿಗೆ ಸಮಾಜ ಸೇವೆಗೂ ಸಿದ್ದ ಎಂಬುದನ್ನು ನಗರದ ತಾಲೂಕು ಮಾಜಿ ಸೈನಿಕರ ಸಂಘ ಪ್ರತಿ ಬಾರಿ ಸಂಕಷ್ಟದ ಸಂದರ್ಭದಲ್ಲಿ ಸಾಬೀತು ಮಾಡಿ ತೋರಿಸುತ್ತಿದೆ. ಈ ಬಾರಿ ಸಹ ಸೇವೆಯನ್ನು ಮುಂದುವರೆಸಿದ್ದು, ಶುಕ್ರವಾರ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಹಾಗು ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಪೌಷ್ಠಿಕಾಂಶವುಳ್ಳ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಪರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಚಾಲನೆ ನೀಡಿ ಮಾಜಿ ಸೈನಿಕರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ, ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದ ಕೋವಿಡ್ ಆರೈಕೆ ಕೇಂದ್ರದಲ್ಲಿರುವವರಿಗೆ, ಶಿವಮೊಗ್ಗ ಮಾಚೇನಹಳ್ಳಿಯ ಮಲ್ನಾಡ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಹಾಗು ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸೇವೆಯ ಸಾರ್ಥಕತೆಗೆ ಮಾಜಿ ಸೈನಿಕರು ಸಾಕ್ಷಿಯಾದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ದಿನೇಶ್‌ಕುಮಾರ್, ಕಾರ್ಯದರ್ಶಿ ವೆಂಕಟಗಿರಿ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment