ಕೋವಿಡ್ ಹಿನ್ನಲೆಯಲ್ಲಿ ಪೌರ ನೌಕರರ ಸಮಸ್ಯೆಗಳನ್ನು ತಕ್ಷಣ ಈಡೇರಿಸಿ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಭದ್ರಾವತಿ ಹಳೇನಗರದ ಜೈ ಭೀಮಾ ನಗರ ವೀಕ್ಷಣೆ ನಡೆಸಿದರು.
ಭದ್ರಾವತಿ, ಜೂ. ೧: ರಾಜ್ಯದಲ್ಲಿ ಇಂದಿಗೂ ತಲೆ ಮೇಲೆ ಮಲ ಹೊರುವ ಪದ್ದತಿ ಕಂಡು ಬರುತ್ತಿದ್ದು, ಕಾಯ್ದೆ ಜಾರಿ ನಡುವೆಯೂ ೫,೦೭೦ ಮಂದಿ ಈ ವೃತ್ತಿಯಲ್ಲಿ ತೊಡಗಿರುವುದು ವಿಷಾದನೀಯ ಸಂಗತಿಯಾಗಿದೆ. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಆರೋಪಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೩ರಲ್ಲಿ ಮಲ ಹೊರುವ ಪದ್ದತಿ ನಿಷೇಧಿತ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೂ ಸಹ ೫,೦೭೦ ಮಂದಿ ಇಂದಿಗೂ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ವರ್ಗ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಇತ್ತೀಚೆಗೆ ಪಾವಗಡ ತಾಲೂಕಿನ ಸಕ್ಕರೆ ಕಾರ್ಖಾನೆಯೊಂದರಲ್ಲಿ ಮಹಿಳೆಯೊಬ್ಬರನ್ನು ಮಲದ ಗುಂಡಿಗೆ ಉಳಿಸಿ ಸ್ವಚ್ಛಗೊಳಿಸಲಾಗಿದೆ. ಈ ವಿಷಯ ತಿಳಿದು ತಕ್ಷಣ ಕಾರ್ಖಾನೆಗೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಗುತ್ತಿಗೆದಾರನಿಂದ ಪೌರ ನೌಕರನಿಗೆ ಅನ್ಯಾಯ:
ಇತ್ತೀಚೆಗೆ ಜೈ ಭೀಮಾ ನಗರದಲ್ಲಿ ಹತ್ಯೆಯಾಗಿರುವ ಗುತ್ತಿಗೆ ಪೌರ ನೌಕರ ಸುನಿಲ್ ಕುಟುಂಬಕ್ಕೆ ಗುತ್ತಿಗೆದಾರನಿಂದ ಅನ್ಯಾಯವಾಗಿದೆ. ಸುನಿಲ್‌ಗೆ ಜೀವವಿಮೆ ಮಾಡಿಸದಿರುವುದು ಹೆಚ್ಚಿನ ಪರಿಹಾರದ ಮೊತ್ತ ಸಿಗದಿರಲು ಕಾರಣವಾಗಿದೆ. ಇದರಿಂದಾಗಿ ಕುಟುಂಬಸ್ಥರು ತೊಂದರೆ ಅನುಭವಿಸುವಂತಾಗಿದೆ. ಈ ನಡುವೆಯೂ ಗಂಡನನ್ನು ಕಳೆದುಕೊಂಡಿರುವ ಮಹಿಳೆಗೆ ಸ್ಥಳೀಯ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಮೊತ್ತವನ್ನು ನೀಡಲಾಗಿದೆ ಎಂದರು.
ಪೌರ ನೌಕರರ ಗುತ್ತಿಗೆ ಪದ್ದತಿ ರದ್ದುಗೊಳಿಸಲು ಚಿಂತನೆ:
ಗುತ್ತಿಗೆದಾರರಿಂದ ಪೌರ ನೌಕರರಿಗೆ ಅನ್ಯಾಯವಾಗುತ್ತಿದ್ದು, ಕನಿಷ್ಠ ಕೂಲಿ ಸಹ ಪೂರ್ಣ ಪ್ರಮಾಣದಲ್ಲಿ ನೌಕರರ ಕೈ ಸೇರುತ್ತಿಲ್ಲ. ಜೊತೆಗೆ ಇಎಸ್‌ಐ ಮತ್ತು ಪಿ.ಎಫ್ ಯೋಜನೆಗಳಿಗೆ ಗುತ್ತಿಗೆದಾರ ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ನೌಕರರನ್ನು ಕಾಯಂಗೊಳಿಸಿ ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಲು ಚಿಂತನೆ ಸಹ ನಡೆಸಲಾಗುತ್ತಿದೆ ಎಂದರು.
ಪೌರ ನೌಕರರಿಗೆ ಸೌಲಭ್ಯಗಳು ಸಮರ್ಪಕವಾಗಿ ಲಭಿಸಲಿ:
ಕೋವಿಡ್-೧೯ರ ಪರಿಣಾಮ ಪೌರ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ ಹಾಗು ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ನೌಕರರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ ಎಂದರು.
ಜೈ ಭೀಮಾ ನಗರ ವೀಕ್ಷಣೆ:
ಪೌರ ಕಾರ್ಮಿಕರು, ದಲಿತರು ಹೆಚ್ಚಾಗಿ ವಾಸಿಸುತ್ತಿರುವ ನಗರದ ಹೃದಯ ಭಾಗದಲ್ಲಿರುವ ಜೈ ಭೀಮಾ ನಗರದಲ್ಲಿ ಶಿವಣ್ಣ ಎಂ. ಕೋಟೆ ವೀಕ್ಷಣೆ ನಡೆಸಿದರು.
ಸ್ಥಳೀಯರು ಮೂಲ ಸೌಲಭ್ಯಗಳ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಕಂಡು ಸ್ಥಳೀಯ ಆಡಳಿತ ವಿರುದ್ಧ ಅಸಮಾಧಾನ ಸಹ ವ್ಯಕ್ತಪಡಿಸಿದರು. ಜೊತೆಗೆ ಪೌರ ನೌಕರರಿಗೆ ಗೃಹ ಭಾಗ್ಯ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಂಕೀರ್ಣಗಳ ಕಾಮಗಾರಿ ಸಹ ಪರಿಶೀಲನೆ ನಡೆಸಿದರು.
ಜಿಲ್ಲಾ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ, ದಲಿತ ಮುಖಂಡ ಚಿನ್ನಯ್ಯ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷ ಆರ್.ಬಿ ಸತೀಶ್, ಸೂಪರ್ ವೈಸರ್ ಗೋವಿಂದ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪೊಲೀಸ್ ಠಾಣೆ ಪ್ರಭಾರಿ ಸಬ್‌ಇನ್ಸ್‌ಪೆಕ್ಟರ್ ಕವಿತಾ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಭದ್ರಾವತಿ ಹಳೇನಗರದ ಜೈ ಭೀಮಾ ನಗರ ವೀಕ್ಷಣೆ ಸಂದರ್ಭದಲ್ಲಿ ಕೊಳಕು ಸ್ಥಳದಲ್ಲಿ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಿರುವುದು ಹಾಗು ಚರಂಡಿಯಲ್ಲಿ ಸ್ವಚ್ಚತೆ ಇಲ್ಲದಿರುವುದನ್ನು ಕಂಡು ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ತೋರ್ಪಡಿಸಿದರು.
No comments:
Post a Comment