Saturday, June 5, 2021

ಲಸಿಕಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ : ವಿನಾಕಾರಣ ಅಪಪ್ರಚಾರ


ಭದ್ರಾವತಿ ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರು ಲಸಿಕೆ ಪಡೆಯುತ್ತಿರುವುದು.
    ಭದ್ರಾವತಿ, ಜೂ. ೫: ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಕೆಲವರು ಲಸಿಕಾ ಕೇಂದ್ರದಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಂತೋಣಿ ಸೇರಿದಂತೆ ಸ್ಥಳೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
     ಶನಿವಾರ ಲಸಿಕಾ ಕೇಂದ್ರದಲ್ಲಿ ಮಾತನಾಡಿದ ಅಂತೋಣಿ, ಕೆಲವರು ವಿನಾಕಾರಣ ಲಸಿಕಾ ಕೇಂದ್ರ ಕುರಿತು ಅಪಪ್ರಚಾರ ನಡೆಸುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿ ಸ್ವಯಂ ಪ್ರೇರಣೆಯಿಂದ ಕೆಲವು ಸ್ಥಳೀಯ ಯುವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸತ್ತಿದ್ದಾರೆ. ಜನಸಂದಣಿ ಸೇರಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುತ್ತಿದ್ದಾರೆ. ಲಭ್ಯವಿರುವ ಲಸಿಕೆ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಅನಗತ್ಯವಾಗಿ ಲಸಿಕಾ ಕೇಂದ್ರಕ್ಕೆ ಬಂದು ಹೋಗುವುದನ್ನು ತಪ್ಪಿಸುತ್ತಿದ್ದಾರೆ ಹೊರತು ಯಾವುದೇ ರೀತಿ ಅವ್ಯವಹಾರ ನಡೆಸುತ್ತಿಲ್ಲ ಎಂದರು.
    ಕಾಂಗ್ರೆಸ್ ಎಸ್‌ಸಿ ನಗರ ಘಟಕದ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಈ ಭಾಗದಲ್ಲಿ ಒಟ್ಟು ೪ ವಾರ್ಡ್‌ಗಳಿವೆ. ಸುಮಾರು ೧೨ ರಿಂದ ೧೩ ಸಾವಿರ ಜನಸಂಖ್ಯೆಗೆ ಒಂದೇ ಒಂದು ನಗರ ಆರೋಗ್ಯ ಪ್ರಾಥಮಿಕ ಕೇಂದ್ರವಿದ್ದು, ಈ ಕೇಂದ್ರದಲ್ಲಿಯೇ ಲಸಿಕಾ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿತ್ತು. ಆದರೆ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದ ಕಾರಣ ಜನಸಂದಣಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯರ ಒತ್ತಾಯದ ಮೇರೆಗೆ ವಾರ್ಡಿನ ನಗರಸಭಾ ಸದಸ್ಯರಾದ ಬಿ.ಕೆ ಮೋಹನ್‌ರವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲು ಕಾರಣಕರ್ತರಾಗಿದ್ದಾರೆ. ಈ ಭಾಗದ ಮುಖಂಡರು, ಕಾರ್ಯಕರ್ತರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಅಪ್ರಪಚಾರದಲ್ಲಿ ತೊಡಗಿದ್ದಾರೆ. ಸಾರ್ವಜನಿಕರು ಇದಕ್ಕೆ ಕಿವಿಗೊಡದೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಲಸಿಕೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
    ಈ ಭಾಗದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ನಿವಾಸಿಗಳು ಆತಂಕದಲ್ಲಿ ಬದುಕುತ್ತಿದ್ದಾರೆ. ನಿವಾಸಿಗಳಿಗೆ ತಕ್ಷಣ ಲಸಿಕೆ ಹಾಕಿಸುವ ಕಡೆ ಗಮನ ಹರಿಸುವುದನ್ನು ಬಿಟ್ಟು ಅಪ್ರಚಾರದಲ್ಲಿ ತೊಡಗಿರುವುದು ಸರಿಯಲ್ಲ ಎಂದು ಮುಖಂಡ ಕಂಚಿ ರಾಜ ಅಸಮಾಧಾನ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಎಸ್‌ಸಿ ವಿಭಾಗದ ತಾಲೂಕು ಅಧ್ಯಕ್ಷ ಹಾಗು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಆರ್. ಅರುಣ್ ಮಾತನಾಡಿ, ಲಸಿಕಾ ಕೇಂದ್ರದಲ್ಲಿ ಅವ್ಯವಹಾರ ಕಂಡು ಬಂದಲ್ಲಿ ಸಾಬೀತು ಮಾಡಿ ತೋರಿಸಲಿ. ಅದು ಬಿಟ್ಟು ವಿನಾಕಾರಣ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಎಚ್ಚರಿಸಿದರು.
ನಡುವೆ ಲಸಿಕೆ ಪಡೆದ ಕೆಲವರು ಮಾತನಾಡಿ, ಲಸಿಕಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ. ಕೆಲವು ಯುವಕರು ಸ್ವಯಂ ಪ್ರೇರಣೆಯಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಸಹ ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.
     ನಗರಸಭೆ ಮಾಜಿ ಸದಸ್ಯ ಮಹೇಶ್, ಜಿ. ರಾಜು ಹಾಗು ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment