Friday, June 11, 2021

ಪತ್ರಕರ್ತರ ಹಿತರಕ್ಷಣೆ ಜೊತೆಗೆ ಕುಟುಂಬದವರ ರಕ್ಷಣೆ ಸಹ ಮುಖ್ಯ : ಬಿ.ವೈ ರಾಘವೇಂದ್ರ


ಭದ್ರಾವತಿ ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಪತ್ರಕರ್ತರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಲಸಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಕೊರೋನಾ ಸೋಂಕಿನ ರಕ್ಷಣೆಗಾಗಿ ಫೇಸ್ ಶೀಲ್ಡ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಸ್ಟೀಮ್ ಇನ್‌ಹಲೇರ್ ಸೇರಿದಂತೆ ಇನ್ನಿತರ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
    ಭದ್ರಾವತಿ, ಜೂ. ೧೧: ಕೊರೋನಾ ಸಂಕಷ್ಟದ ಸಮಯದಲ್ಲೂ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಹಿತರಕ್ಷಣೆ ಜೊತೆಗೆ ಕುಟುಂಬದವರ ರಕ್ಷಣೆ ಸಹ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕುಟುಂಬದವರಿಗೂ ಕೊರೋನಾ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದೀಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಎಲ್ಲರೂ ಲಸಿಕೆ ಹಾಕಿಸಿಕೊಂಡಾಗ ಮಾತ್ರ ೩ನೇ ಅಲೆ ನಿಯಂತ್ರಿಸಲು ಸಾಧ್ಯ. ಈಗಾಗಲೇ ೨ನೇ ಅಲೆ ಪರಿಣಾಮ ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕು ಪುನಃ ಕಾಣಿಸಿಕೊಳ್ಳದಂತೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಬಹಳ ಮುಖ್ಯವಾಗಿದೆ ಎಂದರು.
     ಸಂಕಷ್ಟದ ಸಮಯದಲ್ಲೂ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡುತ್ತಿವೆ. ಅಭಿವೃದ್ಧಿ ಕಾರ್ಯಗಳಿಗೂ ಆರ್ಥಿಕ ನೆರವು ಒದಗಿಸುತ್ತಿವೆ. ಈ ನಡುವೆ ಸಂಕಷ್ಟದ ಸಮಯದಲ್ಲೂ ಹಲವು ಸಂಘ ಸಂಸ್ಥೆಗಳು ನೆರವಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ಭದ್ರಾವತಿ ನಗರದಲ್ಲಿ ಹಲವು ಸಂಘ-ಸಂಸ್ಥೆಗಳು ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿವೆ. ವಿಶೇಷವಾಗಿ ಬಜರಂಗದಳ ಕಾರ್ಯಕರ್ತರು ಸುಮಾರು ೫೦ಕ್ಕೂ ಅಧಿಕ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿರುವುದು ಎಲ್ಲರೂ ಮೆಚ್ಚುವ ಕಾರ್ಯವಾಗಿದೆ ಎಂದರು.
ಪತ್ರಿಕಾಭವನ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಸುಂದರವಾದ ಸಭಾ ಆವರಣದಲ್ಲಿ ಕಾರ್ಯಕ್ರಮಗಳು ನಡೆಯುವಂತಾಗಬೇಕೆಂದರು.
      ಇದೆ ಸಂದರ್ಭದಲ್ಲಿ ಪತ್ರಕರ್ತರಿಗೆ ಕೊರೋನಾ ಸೋಂಕಿನ ರಕ್ಷಣೆಗಾಗಿ ಫೇಸ್ ಶೀಲ್ಡ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಸ್ಟೀಮ್ ಇನ್‌ಹಲೇರ್ ಸೇರಿದಂತೆ ಇನ್ನಿತರ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
     ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಸದಸ್ಯರಾದ ರಾಮಲಿಂಗಯ್ಯ, ವಿ. ಕದಿರೇಶ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪ್ರಮುಖರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment