ಭದ್ರಾವತಿಯಲ್ಲಿ ಸಿ.ಎನ್ ರಸ್ತೆಯಲ್ಲಿರುವ ತಾಲೂಕು ಶಾಖೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಪಳನಿರಾಜ್ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಜೂ. ೯: ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದು, ಮುಂದಿನ ದಿನಗಳಲ್ಲೂ ಇದೆ ದಾರಿಯಲ್ಲಿ ಸಾಗುವ ಮೂಲಕ ಶೋಷಿತರ ಧ್ವನಿಯಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಪಳನಿರಾಜ್ ತಿಳಿಸಿದರು.
ಅವರು ಬುಧವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ತಾಲೂಕು ಶಾಖೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದ ಎರಡು ಬೃಹತ್ ಕಾರ್ಖಾನೆಗಳಾದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಅಂದು ದಲಿತ ಕಾರ್ಮಿಕರ ಮೇಲೆ ಮೇಲ್ವರ್ಗದ ಸಮುದಾಯದ ಜನರಿಂದ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಪ್ರೊ. ಬಿ. ಕೃಷ್ಣಪ್ಪನವರು ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ನಂತರ ಅವರು ರಾಜ್ಯಾದ್ಯಂತ ಹಲವಾರು ಹೋರಾಟಗಳನ್ನು ನಡೆಸುವ ಮೂಲಕ ಶೋಷಿತರ ಪರ ಧ್ವನಿಯಾಗಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇವರ ಹೋರಾಟದ ದಾರಿಯಲ್ಲಿ ಇದೀಗ ಸಂಘಟನೆ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, ಜಿಲ್ಲಾಧ್ಯಕ್ಷ ಹಾಲೇಶಪ್ಪನವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ನಿರಂತರವಾಗಿ ಶೋಷಿತರ ಪರ ಹೋರಾಟ ನಡೆಯಲಿದೆ ಎಂದರು.
ತಾಲೂಕು ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ, ಸಂಘಟನಾ ಸಂಚಾಲಕ ಬಸವರಾಜ, ಖಜಾಂಚಿ ನೀಲಕಂಠ, ಸದಸ್ಯರಾದ ರಾಮನಾಯ್ಕ, ಆನಂದರಾವ್, ಬಾಬಣ್ಣ, ರಾಜು, ಯೋಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
No comments:
Post a Comment