Thursday, July 15, 2021

ಗೃಹರಕ್ಷಕ ದಳದ ಪ್ಲಟೂನ್ ಸಾರ್ಜೆಂಟ್ ಬಿ.ಇ ವಿಜಯೇಂದ್ರಗೆ ಮುಖ್ಯಮಂತ್ರಿ ಪದಕ

ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಭದ್ರಾವತಿ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
    ಭದ್ರಾವತಿ, ಜು. ೧೫: ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ. 
ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಜಯೇಂದ್ರ ಪದಕ ಸ್ವೀಕರಿಸಿದ್ದು, ಗೃಹರಕ್ಷಕದಳದಲ್ಲಿ ಪ್ರಸ್ತುತ ಪ್ಲಟೂನ್ ಸಾರ್ಜೆಂಟ್ ಆಗಿರುವ ಇವರು ೧೯೯೯ರಲ್ಲಿ ಸ್ವಯಂ ಸೇವಕರಾಗಿ ನೇಮಕಗೊಂಡಿದ್ದರು. ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಗೃಹರಕ್ಷಕ ದಳದ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಲೋಪದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಪ್ರತಿ ವರ್ಷ ಕೇಂದ್ರ ಕಛೇರಿ ವತಿಯಿಂದ ಆಯೋಜಿಸುವ ವಿವಿಧ ತರಬೇತಿಯಲ್ಲಿ ಭಾಗವಹಿಸಿ ೨ ಚಿನ್ನ ಹಾಗು ೧ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
ಪತ್ರಿಕೆಯೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರವಾಗಿದೆ. ಕೃಷಿಕರಾಗಿ ತೋಟದ ಕೆಲಸದ ಜೊತೆಗೆ ಗೃಹ ರಕ್ಷಕದಳದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಜೊತೆಗೆ ವೈಯಕ್ತಿಕವಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಹೊಳೆಯಲ್ಲಿ ಕಂಡು ಬರುವ ಅನಾಥ ಶವಗಳ ಪತ್ತೆ ಕಾರ್ಯ, ಸನ್ಮಾರ್ಗ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವು, ಡ್ಯಾನ್ಸ್ ಸ್ಕೂಲ್ ವತಿಯಿಂದ ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ದೇಶ ಭಕ್ತಿ ಗೀತೆ ಮೂಲಕ ಜಾಗೃತಿ ಮೂಡಿಸುವುದು. ಸ್ವಯಂ ಪ್ರೇರಣೆಯಿಂದ ರಕ್ತದಾನ ಸೇರಿದಂತೆ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಇತ್ಯಾದಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. 
ಪ್ರಶಸ್ತಿ ಲಭಿಸಿರುವ ಸಂಭ್ರಮದಲ್ಲಿ ವಿಜಯೇಂದ್ರ ಗುರುಗಳಾದ ವೆಂಕಟರಮಣಯ್ಯ, ರಾಜಣ್ಣ ಜಿಲ್ಲಾ ಸಮಾದೇಷ್ಟರು, ಬೋಧಕರು, ತಾಲೂಕು ಘಟಕಾಧಿಕಾರಿ ಹಾಗು ಗೃಹರಕ್ಷಕ ದಳದ ಎಲ್ಲಾ ಹಿರಿಯರನ್ನು ಮತ್ತು ಸಹದ್ಯೋಗಿಗಳನ್ನು ಸ್ಮರಿಸಿದ್ದಾರೆ.  

No comments:

Post a Comment