ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ.ಎಸ್ ಈಶ್ವರಪ್ಪ
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಸೋಮವಾರ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.
ಭದ್ರಾವತಿ, ಜು. ೫: ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ೨ ಕೋ. ರು. ಅನುದಾನ ಬಿಡುಗಡೆಯಾಗಿದೆ ಎಂದು ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಅವರು ಸೋಮವಾರ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳು ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಪರಿಕಲ್ಪನೆಯನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೊಂದಿದ್ದರು. ಭವಿಷ್ಯದ ರಾಜಕಾರಣಿಗಳಿಗೆ ಇದನ್ನು ಮನದಟ್ಟು ಮಾಡಿಕೊಡುತ್ತಿದ್ದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಲಭ್ಯವಾಗಬೇಕೆಂಬ ಆಶಯದೊಂದಿಗೆ, ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಉದ್ಯೋಗದ ಜೊತೆಗೆ ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ ಎಂದರು.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಡಿಯುವ ನೀರು ಹಾಗು ನೈರ್ಮಲ್ಯ ಕುರಿತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಸಹಾಯವಾಣಿ ಸಂಖ್ಯೆ ಬಿಡುಗಡೆಗೊಳಿಸಲಾಯಿತು.
ಪ್ರಸ್ತುತ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಉದ್ಯೋಗ ಬಯಸುವ ಪ್ರತಿಯೊಬ್ಬರಿಗೂ ಈ ಯೋಜನೆಯಡಿ ತಕ್ಷಣ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಅಲ್ಲದೆ ಕೂಲಿ ಮೊತ್ತ ಹೆಚ್ಚಿಸಿ ಅನ್ಯಾಯವಾಗದಂತೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲುಪುವಂತೆ ಮಾಡಲಾಗಿದೆ. ಇವೆಲ್ಲದರ ಪರಿಣಾಮವಾಗಿ ಯೋಜನೆ ಬಹುತೇಕ ಯಶಸ್ವಿಯಾಗುತ್ತಿದ್ದು, ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದ್ದ ೧೩ ಕೋ. ರು. ಮೊತ್ತದ ಯೋಜನೆಗಳ ಗುರಿಯನ್ನು ಈಗಾಗಲೇ ತಲುಪಲಾಗಿದೆ. ಇನ್ನೂ ಕಾಲಾವಕಾಶವಿದ್ದು, ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಮೊತ್ತ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಪರಿಣಾಮ ಸಚಿವರು ಹೊಸದಾಗಿ ೮೦೦ ಕೋ.ರು. ಬಿಡುಗಡೆಗೊಳಿಸಿದ್ದು, ಈ ಪೈಕಿ ೨ ಕೋ. ರು. ರಾಜ್ಯಕ್ಕೆ ಲಭಿಸಿದೆ ಎಂದರು.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಇನ್ನೂ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಒಂದೆಡೆ ಸಭೆ ನಡೆಸಿ ಗ್ರಾಮದಲ್ಲಾಗಬೇಕಾಗಿರುವ ಕೆಲಸಗಳ ಬಗ್ಗೆ ಮೊದಲು ಅರಿತುಕೊಳ್ಳಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಸೂಕ್ತ ತರಬೇತಿ ಪಡೆದುಕೊಳ್ಳಬೇಕಾಗಿದೆ. ಈ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಮಟ್ಟದಲ್ಲಿ ಕೈಗೊಳ್ಳಬೇಕೆಂದರು.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಆರ್. ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.
ತಾಲೂಕಿನ ೨೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶಾಸಕರ ನಿಧಿಯಲ್ಲಿ ಯಾವುದೇ ಅನುದಾನವಿಲ್ಲವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಗ್ರಾಮಗಳಲ್ಲೂ ಸ್ವಚ್ಛತೆ ಬಹಳ ಮುಖ್ಯ. ಗ್ರಾಮಸ್ಥರು ಈ ಬಗ್ಗೆ ಜಾಗೃತಿ ಹೊಂದಬೇಕು. ತ್ಯಾಜ್ಯ ವಿಲೇವಾರಿ ಹೆಚ್ಚಿನ ತಿಳುವಳಿಕೆ ಹೊಂದಬೇಕೆಂದರು.
ಜಮೀನ್ದಾರ್ ಚನ್ನೇಗೌಡರ ನನೆಪು ಮಾಡಿಕೊಂಡ ಕೆ.ಎಸ್ ಈಶ್ವರಪ್ಪ :
ಅಂತರಗಂಗೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿರಿಯ ಮಾರ್ಗದರ್ಶಕರಾಗಿದ್ದ ದಿವಂಗತ ಚನ್ನೇಗೌಡರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೆನಪು ಮಾಡಿಕೊಂಡರು. ಚನ್ನೇಗೌಡರ ಶಿಷ್ಯರಲ್ಲಿ ತಾವೂ ಸಹ ಒಬ್ಬರಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಇಂದು ಈ ಮಟ್ಟದಲ್ಲಿ ಬೆಳೆದಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಚನ್ನೇಗೌಡರ ಪಾತ್ರ ಸಹ ಪ್ರಮುಖವಾಗಿದೆ. ಗ್ರಾಮಸ್ಥರು ಪ್ರಸ್ತುತ ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯ ಕೈಗೊಳ್ಳುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಜಿ.ಪಂ. ಅಧಿಕಾರಿಗಳಾದ ನಂದಿನಿ, ರಾಮಕೃಷ್ಣ ಪುರಾಣಿಕ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಸದಸ್ಯರಾದ ಗೀತಾ, ಬಿ. ನಾಗೇಶ್, ಮಂಜುಳ, ಸಿ. ಶ್ರೀಧರ್, ಜಿ. ಮಂಜಪ್ಪ, ಟಿ.ಆರ್ ಶೋಭ, ದೇವಿಕಾ, ಎಸ್. ಅನು, ಗಂಗಮ್ಮ, ರವಿ, ಎಸ್.ಎನ್ ಆನಂದಕುಮಾರ್, ಎಚ್. ಶಾಂತ, ಜಿ. ಆನಂದಪ್ಪ ಮತ್ತು ಬಿ. ಮೋನಿಷಾ ಹಾಗು ಸುತ್ತಮುತ್ತಲ ಗ್ರಾ.ಪಂ.ಗಳ ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ತ್ಯಾಜ್ಯ ವಿಲೇವಾರಿ ವಾಹನವನ್ನು ಗ್ರಾ.ಪಂ. ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕುಡಿಯುವ ನೀರು ಹಾಗು ನೈರ್ಮಲ್ಯ ಕುರಿತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಸಹಾಯವಾಣಿ ಸಂಖ್ಯೆ ಬಿಡುಗಡೆಗೊಳಿಸಲಾಯಿತು.
No comments:
Post a Comment