Wednesday, August 18, 2021

ತಾಲೂಕು ಆಡಳಿತದಿಂದ ಕಡತ ವಿಲೇವಾರಿ ವಿಳಂಬ : ರೈತರ ಸಂಘದಿಂದ ಪ್ರತಿಭಟನೆ

ಭದ್ರಾವತಿ ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಆ. ೧೮: ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
   ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಗ್ರಾಮಸ್ಥರು ಕಡತ ವಿಲೇವಾರಿಯಿಂದಾಗಿ ಗ್ರಾಮೀಣಾ ಭಾಗದ ರೈತರು ಹಾಗು ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ವಿಕಲಚೇತನ, ವೃದ್ಧಾಪ್ಯ ಹಾಗು ವಿಧವಾ ವೇತನ ಸಹ ವಿಳಂಬವಾಗುತ್ತಿದ್ದು, ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರು ತಾಲೂಕು ಕಛೇರಿ ಅಲೆದಾಡುವಂತಾಗಿದೆ. ಕಛೇರಿಯಲ್ಲಿ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರತಿ ಬಾರಿ ವಿದ್ಯುತ್ ಸಮಸ್ಯೆ ಇರುವುದಾಗಿ ಉತ್ತರ ನೀಡುತ್ತಾರೆ. ಅಲ್ಲದೆ ಕಛೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
   ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಮನವಿ ಸ್ವೀಕರಿಸಿ ಕಡತ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸುವುದಾಗಿ ಭರವಸೆ ನೀಡಿದರು.
    ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಪ್ರಮುಖರಾದ ಶರತ್ಚಂದ್ರ, ರುದ್ರೇಶ್, ಹನುಮಂತಪ್ಪ, ಮಹಂತೇಶ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment