ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣಭವನ ಉದ್ಘಾಟನೆ
ಬಿಳಿಕಿ ಶ್ರೀಗಳು ಮತ್ತು ಸುವರ್ಣ ಮಹೋತ್ಸವ ಭವನ
* ಅನಂತಕುಮಾರ್
ಭದ್ರಾವತಿ: 'ಮಾನವ ಜನ್ಮ ಶ್ರೇಷ್ಠ, ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ' ಎಂಬ ಧ್ಯೇಯ ಘೋಷ ಹೊಂದುವ ಮೂಲಕ ಮಲೆನಾಡಿನಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಿಂದ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟ ಶಾಖಾ ಹಿರೇಮಠ ಇಂದು ಬೃಹತ್ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.
ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಬಿಳಿಕಿ ಇನ್ನೂ ಗ್ರಾಮೀಣ ಪರಿಸರದಿಂದ ಮುಕ್ತವಾಗಿಲ್ಲ. ಈ ಕಾರಣದಿಂದಲೇ ಬಿಳಿಕಿ ಗ್ರಾಮದಲ್ಲಿರುವ ಹಿರೇಮಠ ತನ್ನ ಸೌಂದರ್ಯವನ್ನು ರಕ್ಷಿಸಿಕೊಂಡಿದೆ. ಜನದಟ್ಟಣೆ ಇಲ್ಲ. ವಾಹನಗಳ ಕಿರಿಕಿರಿ ಇಲ್ಲ. ಕಸದ ರಾಶಿ ಇಲ್ಲ. ಸ್ವಚ್ಛ ಗ್ರಾಮ, ಆರೋಗ್ಯ ಗ್ರಾಮ ಎಂಬ ಮಹಾತ್ಮ ಗಾಂಧಿಯವರ ಮಾತು ಬಿಳಿಕಿ ಗ್ರಾಮಸ್ಥರು ನಿಜವಾಗಿಸಿದ್ದಾರೆ. ಪಾನ ಮುಕ್ತ ಗ್ರಾಮ ಸಹ ಇದಾಗಿದೆ.
ಪೀಠಾಧ್ಯಕ್ಷರಾಗಿ ಕಳೆದ ೩ ದಶಕಗಳಿಂದ ಹಿರೇಮಠದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳಿಗೆ ಇದೀಗ ೫೦ರ ಸಂಭ್ರಮ. ಬಾಲ್ಯದಿಂದಲೇ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗಿ ಬಂದಿರುವ ಶ್ರೀಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದ್ದಾರೆ.
ಶ್ರೀಗಳ ಪ್ರಾಥಮಿಕ ಶಿಕ್ಷಣ :
ಹಿರೇಮಠದ ಪೂರ್ವಾಶ್ರಮದ ಶ್ರೀಮತಿ ನಾಗಮ್ಮ ಮತ್ತು ವೇ|| ಮುರುಗೇಂದ್ರಯ್ಯನವರ ಸುಪುತ್ರರಾಗಿ ಜನಿಸಿ, ತಮ್ಮ ಬಾಲ್ಯದ ಅಧ್ಯಯನವನ್ನು ಬಿಳಿಕಿ ಮತ್ತು ಕಡದಕಟ್ಟೆ ಗ್ರಾಮಗಳಲ್ಲಿ ಪೂರೈಸಿ ನಂತರ ಸಾಲೂರು ಹಿರೇಮಠದ ಲಿಂ|| ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೈದಿಕ, ಜ್ಯೋತಿಷ್ಯ, ಆಗಮ ಶಾಸ್ತ್ರಗಳಲ್ಲಿ ಪರಿಣಿತರಾದರು. ಶ್ರೀ ಜಗದ್ಗುರು ಶ್ರೀ ಪಂಚಪೀಠಾಧೀಶ್ವರರ ಸಾನಿಧ್ಯದಲ್ಲಿ ೧೯೯೦ ಫೆಬ್ರವರಿ ೨ ರಂದು ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿದರು.
ಹಿರೇಮಠಕ್ಕೆ ಶ್ರೀಗಳ ಸೇವೆ :
ಹಿರೇಮಠಕ್ಕೆ ಯಾವುದೇ ಮೂಲ ಆದಾಯಗಳು ಇಲ್ಲದಿದ್ದರೂ ಸಹ ಭಕ್ತರ ದೇಣಿಗೆ ನೆರವಿನಿಂದ ಎಲ್ಲರ ಸಹಕಾರ ದೊಂದಿಗೆ ಶಿಥಿಲಾವಸ್ಥೆಯಲ್ಲಿದ್ದ ಮಠವನ್ನು ಶ್ರೀಗಳು ತಮ್ಮ ದ್ವಾದಶ ಪಟ್ಟಾಧಿಕಾರದ ಸಂದರ್ಭದಲ್ಲಿ ನವೀಕರಣಗೊಳಿಸಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಮತ್ತು ಶ್ರೀ ಗುರು ನಿವಾಸವನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಗೊಳಿಸಿದ್ದಾರೆ. ೦೨-೦೨-೨೦೧೫ರಲ್ಲಿ ತಮ್ಮ ೨೫ನೇ ವರ್ಷದ ಪಟ್ಟಾಧಿಕಾರದ ಸಂಭ್ರಮಾಚರಣೆ ಸಂದರ್ಭದಲ್ಲಿ ಶ್ರೀ ಗುರು ಸಿದ್ದೇಶ್ವರ ಪ್ರಸಾದ ನಿಲಯವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದೀಗ ಜನ್ಮ ಸುವರ್ಣ ಮಹೋತ್ಸವದಂದು ಸುವರ್ಣ ಭವನ ಲೋಕಾರ್ಪಣೆಗೆ ಮುಂದಾಗಿದ್ದಾರೆ.
ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣ ಭವನ ಉದ್ಘಾಟನೆ:
ಹಿರೇಮಠದ ಆವರಣದಲ್ಲಿ ಆ.೨೯ರಂದು ಬೆಳಿಗ್ಗೆ ೧೧.೩೦ಕ್ಕೆ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಶಿವಮೊಗ್ಗ ಆನಂದಪುರ ಶ್ರೀ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಾಳೆಹೊನ್ನೂರು ಖಾಸಾ ಶಾಖಾಮಠ, ಎಡೆಯೂರು, ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅರಸೀಕೆರೆ ಯಳ್ನಾಡು ಸಂಸ್ಥಾನಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶೀಕೇಂದ್ರ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆಮಠದ ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ರಟ್ಟೇಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬಂಕಾಪುರ ಸದಾಶಿವಪೇಟೆ, ವಿರಕ್ತಮಠದ ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಜಡೆ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಕವಲೇದುರ್ಗ ಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಮೇಟಿಕುರ್ಕೆ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮತ್ತು ಹಣ್ಣೆ ಹಿರೇಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಉಪಸ್ಥಿತರಿರುವರು.
ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ ಸುವರ್ಣ ಭವನ ಉದ್ಘಾಟಿಸುವರು. ಗೃಹ ಸಚಿವ ಅರಗಜ್ಞಾನೇಂದ್ರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸುವರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಎಸ್ ಜ್ಯೋತಿ ಪ್ರಕಾಶ್ ಮತ್ತು ಹಿರೇಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
No comments:
Post a Comment