ಭದ್ರಾವತಿ, ಸೆ. ೧೬: ಕೋವಿಡ್-೧೯ ಸೋಂಕು ನಿರ್ಮೂಲನೆಗಾಗಿ ಕೈಗೊಂಡಿರುವ ಲಸಿಕಾ ಅಭಿಯಾನ ಮತ್ತಷ್ಟು ಚುರುಕುಗೊಳಿಸಲು ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸೆ.೧೭ರಂದು ಉಚಿತ ಲಸಿಕಾ ಮಹಾಮೇಳ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ ಒಂದೇ ದಿನ ಸುಮಾರು ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ತಾಲೂಕಿನಲ್ಲಿ ಇದುವರೆಗೂ ಒಟ್ಟು ೧,೧೦,೪೪೮ ಮಂದಿ ಮೊದಲ ಹಂತದ ಲಸಿಕೆ ಹಾಗು ೩೫,೨೨೦ ಮಂದಿ ಎರಡನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಳ್ಳಬೇಕಾಗಿದೆ. ಈ ನಡುವೆ ಉಚಿತ ಲಸಿಕಾ ಮಹಾಮೇಳದ ಹಿನ್ನಲೆಯಲ್ಲಿ ಒಂದೇ ದಿನ ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.
ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಬೆಳಿಗ್ಗೆ ೭ ಗಂಟೆಯಿಂದ ೭ ಗಂಟೆವರೆಗೂ ಲಸಿಕಾ ಮಹಾಮೇಳ ನಡೆಯಲಿದೆ.
No comments:
Post a Comment