ಭದ್ರಾವತಿ ಕಂಚಿನಬಾಗಿಲು ವೃತ್ತದ ಸಮೀಪದ ಅಂಬೇಡ್ಕರ್ ನಗರದ ದುರ್ಗಾಂಬ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ನೂತನ ಶಾಖೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಸೆ. ೨೬: ಕಟ್ಟಡ ಕಾರ್ಮಿಕರ ಸಂಘಟನೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಅಗತ್ಯವಿದ್ದು, ಸಂಘಟನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
ಅವರು ಭಾನುವಾರ ನಗರದ ಕಂಚಿನಬಾಗಿಲು ವೃತ್ತದ ಸಮೀಪದ ಅಂಬೇಡ್ಕರ್ ನಗರದ ದುರ್ಗಾಂಬ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಯೂನಿಯನ್ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಸ್ತುತ ಯೂನಿಯನ್ ಮುನ್ನಡೆಸಿಕೊಂಡು ಹೋಗುತ್ತಿರುವವರು ಕಟ್ಟಡ ಕಾರ್ಮಿಕರ ಪರವಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಾರೆ. ಸರ್ಕಾರದಿಂದ ಲಭ್ಯವಾಗುವ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಕಟ್ಟಡ ಕಾರ್ಮಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಕೈಗೊಂಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಯೂನಿಯನ್ ಇನ್ನೂ ಹೆಚ್ಚು ಸಂಘಟನೆಯಾಗಬೇಕು. ಇದರಿಂದ ನಮ್ಮ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸಿಕೊಳ್ಳಲು ಸಾಧ್ಯ. ಯೂನಿಯನ್ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡ ಅವಶ್ಯಕತೆ ಇದ್ದು, ಅಲ್ಲದೆ ಕಟ್ಟಡ ಕಾರ್ಮಿಕರ ಹಲವಾರು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ಯೂನಿಯನ್ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಆರಂಭಿಕ ಹಂತದಿಂದ ಇಲ್ಲಿಯವರೆಗೂ ಯೂನಿಯನ್ ಬೆಳೆದುಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ. ನೂತನ ಶಾಖೆ ಆರಂಭಿಸಿದರೆ ಸಾಲದು ಅದನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು.
ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಜಾರ್ಜ್, ಬಿ.ಎಂ ಮಂಜುನಾಥ್, ಆರ್. ಶ್ರೇಯಸ್(ಚಿಟ್ಟೆ), ಸುದೀಪ್‌ಕುಮಾರ್, ಯೂನಿಯನ್ ತಾಲೂಕು ತಾಂತ್ರಿಕ ಸಲಹೆಗಾರ ಮನೋಹರ್, ಗೌರವ ಸಲಹೆಗಾರ ಶಿವಣ್ಣಗೌಡ, ನೂತನ ಶಾಖೆಯ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಅಭಿಲಾಷ್ ಸ್ವಾಗತಿಸಿದರು. ನ್ಯಾಯವಾದಿ ಎಂ. ಶಿವಕುಮಾರ್ ನಿರೂಪಿಸಿದರು. ನೂತನ ಶಾಖೆಯ ಪದಾಧಿಕಾರಿಗಳು, ಅಂಬೇಡ್ಕರ್ ನಗರದ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು.
No comments:
Post a Comment