ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾರದ ಅಪ್ಪಾಜಿ ಮಾತನಾಡಿದರು.
ಭದ್ರಾವತಿ, ಅ. ೨೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪುನಃ ಅಭಿವೃದ್ದಿಪಡಿಸಿ ಕ್ಷೇತ್ರದ ನಾಗರೀಕರಿಗೆ ಉದ್ಯೋಗ ಒದಗಿಸಿಕೊಡುವಂತೆ ಮುಂಬರುವ ವಿಧಾನಸಭಾ ಚುನಾವಣೆಯ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಮನವಿ ಮಾಡಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಕಾರ್ಖಾನೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿಕೊಡಬೇಕು. ಸರ್ಕಾರ ಕಾರ್ಖಾನೆ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಸುಮಾರು ೪೦ ವರ್ಷಗಳ ಅವಧಿಗೆ ಈಗಾಗಲೇ ಗುತ್ತಿಗೆ ನೀಡಿದೆ. ಈ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರನ್ನು ಇಲ್ಲಿಗೆ ನಿಯೋಜನೆಗೊಳಿಸಬೇಕು. ಅಲ್ಲದೆ ಈಗಾಗಲೇ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇಲೆ ತೆರಳಿರುವ ನೌಕರರನ್ನು ಅಲ್ಲಿಯೇ ಕಾಯಂಗೊಳಿಸಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಓರ್ವ ಕಾರ್ಮಿಕನ ಪತ್ನಿಯಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ ಎಂದರು.
ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಮಾತನಾಡಿ, ಕಾರ್ಮಿಕ ಇಲಾಖೆ ಇದೀಗ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿದೆ. ಇದರಿಂದಾಗಿ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರು ಹಾಗು ಕುಟುಂಬ ವರ್ಗದವರಿಗೆ ಆತಂಕ ಉಂಟಾಗಿದೆ. ಈ ನಡುವೆ ಶಾರದ ಅಪ್ಪಾಜಿ ಅವರು ಕಾರ್ಮಿಕರು ಮತ್ತು ಕುಟುಂಬ ವರ್ಗದವರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ನಿಮ್ಮ ಮುಂದಿನ ಹೋರಾಟಗಳಿಗೆ ನಿಮ್ಮ ಜೊತೆ ಇರುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅಥವಾ ಖಾಸಗಿಕರಣಗೊಳಿಸಲು ಯಾವುದೇ ರೀತಿ ಅಭ್ಯಂತರವಿಲ್ಲ. ಈ ಕುರಿತು ಉಚ್ಛನ್ಯಾಯಾಲಯದಲ್ಲೂ ಸ್ಪಷ್ಟಪಡಿಸಲಾಗಿದ್ದು, ಆದರೆ ಕಾರ್ಖಾನೆಯಲ್ಲಿ ಪ್ರಸ್ತುತ ಉಳಿದುಕೊಂಡಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸರ್ಕಾರ ನ್ಯಾಯಾಲಯದಲ್ಲಿ ಉಳಿದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ. ಅದರಂತೆ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಳಿಸುವಂತೆ ಕೋರಲಾಗಿದೆ. ಈಗಾಗಲೇ ಕೆಲವು ಕಾರ್ಮಿಕರನ್ನು ನಿಯೋಜನೆ ಮೇಲೆ ಕಳುಹಿಸಲಾಗಿದೆ. ಇವರನ್ನು ಆಯಾ ನಿಗಮ-ಮಂಡಳಿಗಳಲ್ಲಿ ವಿಲೀನ ಮಾಡಿಕೊಂಡು ಸೂಕ್ತ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಉಳಿದಂತೆ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ತಕ್ಷಣ ಉದ್ಯೋಗ ನೀಡುವಂತೆ ಒತ್ತಾಯಿಸಲಾಗಿದೆ. ಆ ನಂತರ ಸರ್ಕಾರ ಕಾರ್ಖಾನೆಯನ್ನು ಮುಚ್ಚುವ ಮುಂದಿನ ಪ್ರಕ್ರಿಯೆ ಆರಂಭಿಸಲಿ ಎಂದರು.
ಪ್ರಸ್ತುತ ಕಾರ್ಮಿಕ ಇಲಾಖೆ ಹೊರಡಿಸಿರುವ ಆದೇಶವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಸಂಬಂಧ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಡುವೆ ಕಾರ್ಖಾನೆ ಆಡಳಿತ ಮಂಡಳಿ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಈ ಸಂಬಂಧ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಗಮನಿಸಿದಾಗ ಆಡಳಿತ ಮಂಡಳಿ ತರಾತರಿಯಲ್ಲಿ ಕಾರ್ಖಾನೆಯನ್ನು ಮುಚ್ಚಲು ಮುಂದಾಗಿರುವುದರ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ. ಈಗಲೂ ಕಾರ್ಖಾನೆಯನ್ನು ಮುಚ್ಚಲು ವಿರೋಧವಿಲ್ಲ. ಆದರೆ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಕಾರ್ಮಿಕರ ಹಿತಾಸಕ್ತಿಯಿಂದ ಅವರ ಹೋರಾಟಕ್ಕೆ ಬೆಂಬಲ ನೀಡಲಿದೆ. ಇಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಕುಮಾರ್, ಜೆ.ಪಿ ಯೋಗೇಶ್, ಕರಿಯಪ್ಪ, ಬದರಿನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment