Wednesday, October 20, 2021

ಸರ್ಕಾರಿ ಕಾರ್ಯಕ್ರಮಗಳ ಅರಿವು ಮೂಡಿಸಲು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಸಹಕಾರಿ : ಆರ್. ಪ್ರದೀಪ್

ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮುದಾಯಭವನದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತದಿಂದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತಹಸೀಲ್ದಾರ್ ಆರ್. ಪ್ರದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಅ. ೨೦: ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವುಗಳ ಅನುಷ್ಠಾನಕ್ಕೆ ಸರ್ಕಾರವೇ ಜನರ ಮನೆಬಾಗಿಲಿಗೆ ಬರುತ್ತಿದ್ದು, ಈ ನಿಟ್ಟಿನಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
  ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮುದಾಯಭವನದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತದಿಂದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವೈಯಕ್ತಿಕ ಹಾಗು ಸಮುದಾಯದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗಹರಿಸಲು ಪ್ರಯತ್ನಿಸಲಾಗುವುದು. ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಮುಖವಾಗಿ ರೈತರು, ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜಿಲ್ಲಾ ಹಾಗು ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕೆಂದರು.
    ಗ್ರಾಮದ ಸರ್ಕಾರಿ ಶಾಲೆ,  ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸ್ಮಶಾನ ಭೂಮಿ, ಘನತ್ಯಾಜ್ಯ ವಿಲೇವಾರಿ ಘಟಕ, ಪಶುವೈದ್ಯ ಆಸ್ಪತ್ರೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಿದರು.  ರಾತ್ರಿ ಸರ್ಕಾರಿ ಶಾಲೆಯಲ್ಲಿಯೇ ಊಟ ಮಾಡಿ ಕಂದಾಯ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ಅಲ್ಲಿಯೇ ತಂಗಿದ್ದರು.
    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪ್ರೀತಾ, ಉಪಾಧ್ಯಕ್ಷ ಮಲ್ಲೇಶಪ್ಪ, ಪಂಚಾಯತಿ ಎಲ್ಲಾ ಸದಸ್ಯರುಗಳು ಮತ್ತು ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಊರಿನ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಶಿರಸ್ತೇದಾರ್ ರಾಜ್ ಅರಸ್, ಮಂಜನಾಯ್ಕ್, ನಾರಾಯಣಗೌಡ, ಬಸವರಾಜ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಪ್ರಶಾಂತ್, ಜಗದೀಶ್, ಅಭಿವೃದ್ಧಿ ಅಧಿಕಾರಿ, ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರುಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  ಒಟ್ಟು ೪೯ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಯಿತು.  

No comments:

Post a Comment