Wednesday, November 10, 2021

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ೧೩ನೇ ದಿನದ ಪುಣ್ಯಸ್ಮರಣೆ : ರಕ್ತದಾನ, ನೇತ್ರದಾನ ನೋಂದಾಣಿ, ಅನ್ನಸಂತರ್ಪಣೆ

ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಪುನೀತ್ ಹೆಸರು ನಾಮಕರಣಕ್ಕೆ ಆಗ್ರಹ


ಭದ್ರಾವತಿ ಬಿ.ಎಚ್ ರಸ್ತೆ ೩ನೇ ವಾರ್ಡ್ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಸಮೀಪದ ನೃಪತುಂಗ ಆಟೋ ನಿಲ್ದಾಣದಲ್ಲಿ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬುಧವಾರ ಚಿತ್ರನಟ ಪುನೀತ್‌ರಾಜ್‌ಕುಮಾರ್ ಅವರ ೧೩ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ರೋಟರಿ ಕ್ಲಬ್ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ರಕ್ತ ತಪಾಸಣೆ, ಶಿವಮೊಗ್ಗ  ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ನೇತ್ರದಾನ ನೋಂದಾಣಿ ಹಾಗು ನೇತ್ರ ತಪಾಸಣೆ ಮತ್ತು ಅಭಿಮಾನಿಗಳು, ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸುಮಾರು ೩ ರಿಂದ ೪ ಸಾವಿರ ಮಂದಿಗೆ ಮಾಂಸಾಹಾರ ವಿತರಣೆ ನೆರವೇರಿಸಲಾಯಿತು.



    ಭದ್ರಾವತಿ, ನ. ೧೦: ಚಲನ ಚಿತ್ರ ನಟ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ೧೩ನೇ ದಿನದ ಪುಣ್ಯ ಸ್ಮರಣೆ ಅಂಗವಾಗಿ ಬುಧವಾರ ಸಹ ತಾಲೂಕಿನ ವಿವಿಧೆಡೆ ಅಭಿಮಾನಿಗಳು ಹಾಗು ವಿವಿಧ ಸಂಘಟನೆಗಳಿಂದ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.
    ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ :
    ನಗರದ ಬಿ.ಎಚ್ ರಸ್ತೆ ೩ನೇ ವಾರ್ಡ್ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಸಮೀಪದ ನೃಪತುಂಗ ಆಟೋ ನಿಲ್ದಾಣದಲ್ಲಿ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರೋಟರಿ ಕ್ಲಬ್ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ರಕ್ತ ತಪಾಸಣೆ, ಶಿವಮೊಗ್ಗ  ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ನೇತ್ರದಾನ ನೋಂದಾಣಿ ಹಾಗು ನೇತ್ರ ತಪಾಸಣೆ ಮತ್ತು ಅಭಿಮಾನಿಗಳು, ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, , ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸುಮಾರು ೩ ರಿಂದ ೪ ಸಾವಿರ ಮಂದಿಗೆ ಮಾಂಸಾಹಾರ ವಿತರಣೆ ನೆರವೇರಿಸಲಾಯಿತು.
    ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಾರ್ಡಿನ ನಗರಸಭಾ ಸದಸ್ಯ ಜಾರ್ಜ್ ಮಾತನಾಡಿ, ಪವರ್ ಸ್ಟಾರ್ ಪುನೀತ್ ಡಾ. ರಾಜ್‌ಕುಮಾರ್ ಅವರ ಅಗಲಿಕೆ ನಮ್ಮೆಲ್ಲರ ಮನಸ್ಸಿಗೆ ನೋವುಂಟು ಮಾಡಿದೆ. ಅವರ ಸ್ಮರಣಾರ್ಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದರು.
ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಸಂಘ ಹೆಚ್ಚಿನ ಗಮನ ಹರಿಸಲಿದೆ ಎಂದರು.
    ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳಾದ ರವಿಕುಮಾರ್(ಅಪ್ಪು), ಅರ್ಪಿತ್‌ಕುಮಾರ್ ಮತ್ತು ಲಲಿತ್ ಸೇರಿದಂತೆ ಇನ್ನಿತರರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಓರ್ವ ಶ್ರೇಷ್ಠ ನಟರಾಗಿದ್ದಾರೆ. ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ನೆರವಾಗಲು ಅವರ ಹೆಸರನ್ನು ನಗರದ ಹಳೇಸೇತುವೆಗೆ ಬದಲಿಯಾಗಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಗೆ ನಾಮಕರಣಗೊಳಿಸುವುದು. ಜೊತೆಗೆ ನಗರಸಭೆ ವತಿಯಿಂದ ನೃಪತುಂಗ ಆಟೋ ನಿಲ್ದಾಣದ ಬಳಿ ವರನಟ ಡಾ. ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.  
    ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ,  ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಬಿಜೆಪಿ ಹಿಂದುಳಿದ ಮೋರ್ಚಾದ ರಾಜಶೇಖರ್ ಉಪ್ಪಾರ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗದ ನವೀನ್‌ಕುಮಾರ್‌ ಸೇರಿದಂತೆ ಪದಾಧಿಕಾರಿಗಳು, ಅಭಿಮಾನಿಗಳು, ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
       ಗೋಣಿಬೀಡು-ಮಲ್ಲಿಗೆನಹಳ್ಳಿಯಲ್ಲಿ ರಕ್ತದಾನ :
    ತಾಲೂಕಿನ ಗೋಣಿಬೀಡು-ಮಲ್ಲಿಗೆನಹಳ್ಳಿ ಕ್ಯಾಂಪ್ ಗ್ರಾಮಸ್ಥರು ಹಾಗು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹಾಗು ಕನ್ನಡ ರಾಜ್ಯೋತ್ಸವ ಅಂಗವಾಗಿ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ರಕ್ತನಿಧಿ ಸಹಯೋಗದೊಂದಿಗೆ ವಿಶೇಷ ರಕ್ತದಾನ ಶಿಬಿರ ಆಯೋಜಿಸಿದ್ದರು.
    ಶಿಬಿರ ಮಧ್ಯಾಹ್ನ ೨ ಗಂಟೆವರೆಗೆ ನಡೆಯಿತು. ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ತ್ಯಾಗರಾಜ್, ಮಹೇಶ್‌ಗೌಡ, ವಿಜಯಕುಮಾರ್, ಎಸ್. ಚೇತನ್‌ಕುಮಾರ್, ಪಾಪನಾಯಕ ಹಾಗು ಗೋಣಿಬೀಡು-ಮಲ್ಲಿಗೆನಹಳ್ಳಿ ಕ್ಯಾಂಪ್ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ತಾಲೂಕಿನ ಗೋಣಿಬೀಡು-ಮಲ್ಲಿಗೆನಹಳ್ಳಿ ಕ್ಯಾಂಪ್ ಗ್ರಾಮಸ್ಥರು ಹಾಗು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹಾಗು ಕನ್ನಡ ರಾಜ್ಯೋತ್ಸವ ಅಂಗವಾಗಿ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ರಕ್ತನಿಧಿ ಸಹಯೋಗದೊಂದಿಗೆ ವಿಶೇಷ ರಕ್ತದಾನ ಶಿಬಿರ ಆಯೋಜಿಸಿದ್ದರು.


No comments:

Post a Comment