Tuesday, November 9, 2021

ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣ : ಸಂತ್ರಸ್ಥರಿಗೆ ಭೂ ಪರಿಹಾರ ತಿಳುವಳಿಕೆ ಪತ್ರ

ಪರಿಹಾರ ಮೊತ್ತ ಹೆಚ್ಚಿಸದ ಹಿನ್ನಲೆಯಲ್ಲಿ ಆತಂಕ, ಧೈರ್ಯ ತುಂಬಿದ ಎಎಪಿ ಜಿಲ್ಲಾಧ್ಯಕ್ಷ


ಭದ್ರಾವತಿ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂತ್ರಸ್ಥರಾಗಿರುವ ಸಮೀಪದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಭೂ ಪರಿಹಾರ ತಿಳುವಳಿಕೆಯೊಂದಿಗೆ ತೆರವಿಗೆ ಜಿಲ್ಲಾಡಳಿತ ಸೂಚಿಸಿದ್ದು, ತಾಲೂಕು ಆಡಳಿತ ಪರವಾಗಿ ಕಂದಾಯಾಧಿಕಾರಿ ಪ್ರಶಾಂತ್ ಮಂಗಳವಾರ ಸಂತ್ರಸ್ಥರಿಗೆ ತಿಳುವಳಿಕೆ ಪತ್ರ ನೀಡಿದರು.
    ಭದ್ರಾವತಿ, ನ. ೯; ನಗರದ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂತ್ರಸ್ಥರಾಗಿರುವ ಸಮೀಪದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಭೂ ಪರಿಹಾರ ತಿಳುವಳಿಕೆಯೊಂದಿಗೆ ತೆರವಿಗೆ ಜಿಲ್ಲಾಡಳಿತ ಸೂಚಿಸಿದ್ದು, ಪರಿಹಾರ ಮೊತ್ತ ಹೆಚ್ಚಳ ಮಾಡದ ಹಿನ್ನಲೆಯಲ್ಲಿ ನಿವಾಸಿಗಳು ಆತಂಕಗೊಂಡಿದ್ದಾರೆ.
    ಸಂಪೂರ್ಣ ಸ್ವತ್ತು ಕಟ್ಟಡದೊಂದಿಗೆ ಭೂಸ್ವಾಧೀನವಾಗುತ್ತಿರುವ ಪ್ರದೇಶದ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ಜುಲೈ ೬ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದರ ನಿರ್ಧರಣಾ ಸಮಿತಿ ಮತ್ತು ಭೂ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಸಂತ್ರಸ್ಥರಿಗೆ ಜೇಡಿಕಟ್ಟೆ ಬಳಿ ಬದಲಿ ನಿವೇಶನ ನೀಡುವ ಜೊತೆಗೆ ಒಂದು ಬಾರಿ ಪರಿಹಾರದಂತೆ ೫ ಲಕ್ಷ ರು. ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ನ.೨ರಂದು ಸಂತ್ರಸ್ಥರಿಗೆ ತಿಳುವಳಿಕೆ ಪತ್ರ ಹೊರಡಿಸಿದ್ದು, ಮಂಗಳವಾರ ತಾಲೂಕು ಆಡಳಿತ ಪರವಾಗಿ ಕಂದಾಯಾಧಿಕಾರಿ ಪ್ರಶಾಂತ್ ತಿಳುವಳಿಗೆ ಪತ್ರ ವಿತರಿಸುವ ಜೊತೆಗೆ ಪರಿಹಾರ ಪಡೆಯಲು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು.
    ಸಂತ್ರಸ್ಥರು ಪರಿಹಾರ ಮೊತ್ತ ಹೆಚ್ಚಿಸುವಂತೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
    ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇಂದು ೫ ಲಕ್ಷ ರು. ಪರಿಹಾರದಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಸಾಧ್ಯವಾಗಿದ್ದು, ಪರಿಹಾರ ಮೊತ್ತ ೧೦ ಲಕ್ಷ ರು. ನಿಗದಿಪಡಿಸುವ ಜೊತೆಗೆ ಅಂಗಡಿಮುಂಗಟ್ಟುಗಳ ವ್ಯಾಪಾರಸ್ಥರನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದರು. ಆದರೂ ಸಹ ಜಿಲ್ಲಾಧಿಕಾರಿಗಳು ಮನವಿಗೆ ಪೂರಕವಾಗಿ ಸ್ಪಂದಿಸದಿರುವ ಹಿನ್ನಲೆಯಲ್ಲಿ ಸಂತ್ರಸ್ಥರು ಆತಂಕಗೊಂಡಿದ್ದಾರೆ.
    ಈ ನಡುವೆ ತಿಳುವಳಿಕೆ ಪತ್ರ ನೀಡುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಸಂತ್ರಸ್ಥರಿಗೆ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಜೊತೆಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿ ಒತ್ತಾಯಿಸುವ ಭರವಸೆ ನೀಡಿದರು.

No comments:

Post a Comment