ನೇತ್ರದಾನ ನೋಂದಾಣಿ ಮಾಡಿಸಿ, ಜಾಗೃತಿ ಮೂಡಿಸಿದ ವಿಐಎಸ್‌ಎಲ್ ಸಮುದಾಯ
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಎಚ್‌ಆರ್‌ಡಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು ೨೦೨ ಮಂದಿ ನೇತ್ರದಾನ ನೋಂದಾಣಿ ಮಾಡುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ನೋಂದಾಣಿ ಅರ್ಜಿಗಳನ್ನು ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಹಸ್ತಾಂತರಿಸಿದರು.
ಭದ್ರಾವತಿ, ನ. ೨೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾಯಂ ಕಾರ್ಮಿಕರು, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ವರ್ಗದವರು ಸಾಮಾಜಿಕ ಕಳಕಳಿಯೊಂದಿಗೆ ಸ್ವಯಂ ಪ್ರೇರಣೆಯಿಂದ ನೇತ್ರದಾನ ನೋಂದಾಣಿಗೆ ಮುಂದಾಗುವ ಮೂಲಕ ಗಮನ ಸೆಳೆದಿದ್ದಾರೆ.
ಬುಧವಾರ ಕಾರ್ಖಾನೆಯ ಎಚ್‌ಆರ್‌ಡಿ ಕೇಂದ್ರದಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಇಲಾಖೆ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ನಗರದ ನಯನ ಆಸ್ಪತ್ರೆ ಸಹಯೋಗದೊಂದಿಗೆ ಆಜಾದಿ ಕ ಅಮೃತ್ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು ೨೦೨ ಮಂದಿ ನೇತ್ರದಾನ ನೋಂದಾಣಿ ಮಾಡುವ ಮೂಲಕ ವಿಶೇಷವಾಗಿ ನೇತ್ರದಾನದ ಬಗ್ಗೆ ಸಮಾಜದಲ್ಲಿ ಹೊಂದಿರುವ ತಪ್ಪು ಕಲ್ಪನೆಗಳಿಂದ ಹೊರಬರುವಂತೆ ಜಾಗೃತಿ ಮೂಡಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ರಕ್ಷಿತ್ ಮಾತನಾಡಿ, ನೇತ್ರಗಳ ಸಂಗ್ರಹಣೆ, ದಾಸ್ತಾನು ಮತ್ತು ನೇತ್ರ ರಹಿತರಿಗೆ ಬಳಸುವಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನೇತ್ರದಾನ ಮಾಡುವ ಪ್ರತಿಜ್ಞೆ ತೆಗೆದುಕೊಂಡ ಕಾರ್ಖಾನೆಯ ಸಮುದಾಯದ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ನಯನ ಆಸ್ಪತ್ರೆಯ ನೇತ್ರ ತಜ್ಞ ಡಾ. ಕುಮಾರಸ್ವಾಮಿ ನೇತ್ರದಾನದ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಕುರಿತು ಮಾತನಾಡಿದರು. ಜೊತೆಗೆ ಭದ್ರಾವತಿಯ ಸುತ್ತಮುತ್ತಲಿನ ದಾನಿಗಳಿಂದ ನೇತ್ರಗಳನ್ನು ಸಂಗ್ರಹಿಸಿ, ಅದನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ತಲುಪಿಸುವಲ್ಲಿ ನಯನ ಆಸ್ಪತ್ರೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ನೇತ್ರದಾನ ನೋಂದಾಣಿ ಅರ್ಜಿಗಳನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದ ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ಸಮುದಾಯದ ಉದಾತ್ತ ಕಾರ್ಯವಾದ ನೇತ್ರದಾನ ಮಾಡುವುದರ ಬಗ್ಗೆ ಕೈಗೊಂಡ ಪ್ರತಿಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಗಳಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅಂಧತ್ವ ನಿರ್ಮೂಲನೆ ಮಾಡಬಹುದೆಂಬ ವಿಶ್ವಾಸವಿದೆ ಎಂದರು. ವಿಐಎಸ್‌ಎಲ್ ವತಿಯಿಂದ ಮುಂದಿನ ದಿನಗಳಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುವಂತೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ. ಚಕ್ರವರ್ತಿ, ವಿಐಎಸ್‌ಎಲ್ ಆಸ್ಪತ್ರೆಯ ವೈಧ್ಯಕೀಯ ಮುಖ್ಯಸ್ಥ ಡಾ. ಎಂ.ವೈ. ಸುರೇಶ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಅಧ್ಯಕ್ಷ ಲೋಕನಾಥ್, ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್, ವಿವಿಧ ವಿಭಾಗಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘ ಮತ್ತು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment