ಇಲಾಖೆಯಿಂದ ಚೆಕ್ ನೀಡಿದರೂ, ಗುತ್ತಿಗೆದಾರರಿಗೆ ನೀಡದ ಅಧಿಕಾರಿಗಳು
ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷ ಧನಶೇಖರ್ ನೇತೃತ್ವದಲ್ಲಿ ಶನಿವಾರ ಭದ್ರಾವತಿ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್ ಅವರೊಂದಿಗೆ ಗುತ್ತಿಗೆದಾರರು ಚರ್ಚೆ ನಡೆಸಿದರು.
ಭದ್ರಾವತಿ, ಡಿ. ೧೮: ಇದೀಗ ನೀರಾವರಿ ಇಲಾಖೆಯಲ್ಲೂ ಶೇ.೨೦ರಷ್ಟು ಕಮೀಷನ್ ದಂಧೆ ವ್ಯಾಪಕವಾಗಿದ್ದು, ಸ್ವಂತ ಹಣದಲ್ಲಿ ಈಗಾಗಲೇ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿರುವ ಗುತ್ತಿಗೆದಾರರು ಇಲಾಖೆಯಿಂದ ಹಣ ಪಡೆಯಲು ಅಲೆದಾಡುವಂತಾಗಿದೆ.
ತಾಲೂಕಿನ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡಿರುವ ಸುಮಾರು ೧೨ ಗುತ್ತಿಗೆದಾರರಿಗೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಇಲಾಖೆಗೆ ಕಾಮಗಾರಿ ಬಿಲ್ ಪಾವತಿಗೆ ವಿವರಗಳನ್ನು ಸಹ ಸಲ್ಲಿಸಲಾಗಿದೆ. ಅದರಂತೆ ಇಲಾಖೆಯಿಂದ ಚೆಕ್‌ಸಹ ಬಿಡುಗಡೆಯಾಗಿದೆ. ಚೆಕ್ ಬಿಡುಗಡೆಯಾಗಿ ಸುಮಾರು ೧ ತಿಂಗಳು ಕಳೆದರೂ ಸಹ ಗುತ್ತಿಗೆದಾರರಿಗೆ ಬಿಆರ್‌ಎಲ್‌ಬಿಸಿ ಕಾರ್ಯಪಾಲಕ ಅಭಿಯಂತರರು ನೀಡದೆ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.
ಬಿಲ್ ತಡೆ ಹಿಡಿದಿರುವ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಗುತ್ತಿಗೆದಾರ ಮಹೇಶ ಹಾವೇರಿ, ಸ್ವಂತ ಹಣದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಇಲಾಖೆಯಿಂದ ಹಣ ಪಡೆಯಲು ಎದುರು ನೋಡುತ್ತಿದ್ದೇನೆ. ಚೆಕ್ ನೀಡುವಂತೆ ಹಲವು ಮನವಿ ಮಾಡಿದರು ಸಹ ನೀಡುತ್ತಿಲ್ಲ. ಶೇ.೨೦ರಷ್ಟು ಕಮೀಷನ್ ಹಣ ನೀಡಿದರೆ ಮಾತ್ರ ಚೆಕ್ ನೀಡುತ್ತೇವೆ ಎಂದು ಅಭಿಯಂತರರು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್‍ಸ್ ಅಸೋಸಿಯೇಷನ್‌ಗೂ ದೂರು ನೀಡಿದ್ದಾರೆ.
೨ ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ :
ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷ ಧನಶೇಖರ್ ನೇತೃತ್ವದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್ ಅವರೊಂದಿಗೆ ಗುತ್ತಿಗೆದಾರರು ಚರ್ಚೆ ನಡೆಸಿದರು.
ಗುತ್ತಿಗೆದಾರರಿಗೆ ತಕ್ಷಣ ಚೆಕ್ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಬಣಕಾರ್‌ರವರು ಚೆಕ್ ನೀಡದಿರಲು ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ೨ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಗುತ್ತಿಗೆದಾರರು ಸದ್ಯಕ್ಕೆ ಮೌನ್ಯಕ್ಕೆ ಶರಣಾಗಿದ್ದಾರೆ.
No comments:
Post a Comment