Saturday, December 18, 2021

ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ

ಕೆರೆಗಳಿಗೆ ಸರ್.ಎಂ.ವಿ, ಪುನೀತ್ ಹೆಸರು ನಾಮಕರಣಕ್ಕೆ ಮನವಿ


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಮತ್ತು ಸುರ್ವಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಮನವಿಸಲಾಯಿತು.
    ಭದ್ರಾವತಿ, ಡಿ. ೧೮: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಮತ್ತು ಸುರ್ವಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಮನವಿಸಲಾಯಿತು.
    ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿನ ಸಮಗ್ರ ಸರಬರಾಜು ಯೋಜನೆ, ಒಳಚರಂಡಿ ಯೋಜನೆ, ಉದ್ಯಾನವನ ಅಭಿವೃದ್ಧಿ, ಕೆರೆಗಳ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಜೊತೆಗೆ ನಗರಸಭೆ ವ್ಯಾಪ್ತಿ ಜನ್ನಾಪುರ ಸರ್ವೆ ನಂ.೭೦ರ ೪೫.೨೦ ಎಕರೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆಗೆ 'ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ದೋಣಿವಿಹಾರ ಜನ್ನಾಪುರ ಸರ್ಕಾರಿ ಕೆರೆ' ಎಂಬ ಹೆಸರನ್ನು ಹಾಗು ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪವಿರುವ ಸುಮಾರು ೫೦.೨೦ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಹಿರೇಕೆರೆಗೆ 'ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ದೋಣಿವಿಹಾರ ಸರ್ಕಾರಿ ಹಿರೇಕೆರೆ' ಎಂಬ ಹೆಸರನ್ನು ನಾಮಕರಣಗೊಳಿಸಲು ಕೋರಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿರುವ ತಾಲೂಕು ಆಡಳಿತಕ್ಕೆ ಸೇರಿದ ಸುಮಾರು ೧೭ ಕೆರೆಗಳನ್ನು ಹಾಗು ಜಿಲ್ಲಾ ಪಂಚಾಯಿತಿಗೆ ಸೇರಿದ ೧೫ ಕೆರೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ನಗರಸಭೆ ಆಡಳಿತಕ್ಕೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದೆ ರೀತಿ ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಒಳಪಟ್ಟಿರುವ ಸುಮಾರು ೩೬ ಕೆರೆಗಳನ್ನು ಹಾಗು ವಿಐಎಸ್‌ಎಲ್ ಕಾರ್ಖಾನೆ ಆಡಳಿತಕ್ಕೆ ಒಳಪಟ್ಟ ೨ ಕೆರೆಗಳನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಟ್ರಸ್ಟ್ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ  ಆರ್. ವೇಣುಗೋಪಾಲ್, ಆಪ್ತ ಸಹಾಯಕ ಮುರುಗನ್ ಉಪಸ್ಥಿತರಿದ್ದರು.

No comments:

Post a Comment