Wednesday, January 5, 2022

ಅತ್ಯಾಚಾರಕ್ಕೆ ಯತ್ನಿಸಿ ಪತಿ ಹತ್ಯೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

    ಭದ್ರಾವತಿ, ಜ. ೫: ಮಧ್ಯ ರಾತ್ರಿ ಮನೆಗೆ ನುಗ್ಗಿ ಗೃಹಿಣಿಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದ ವ್ಯಕ್ತಿಯನ್ನು ತಡೆಯಲು ಹೋದ ಪತಿಯ ಮೇಲೆ ತೀವ್ರ ಹಲ್ಲೆ ನಡೆದು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆರೋಪಿಗೆ ಜೀವಾವಧಿ ಹಾಗು ರು. ೨೦,೦೦೦ ದಂಡ ವಿಧಿಸಿ ತೀರ್ಪು ನೀಡಿದೆ.
ಸುಮಾರು ೩ ವರ್ಷಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡರಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿದ್ದು, ಇದೆ ಗ್ರಾಮದ ನಿವಾಸಿ ಮನ್ಸೂರ್ ಆಲಿಖಾನ್(೨೯) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಮೂಲತಃ ಅಸ್ಸಾಂ ರಾಜ್ಯದ ನಬೀಕುಲ್ ಇಸ್ಲಾಂ(೨೧) ಹತ್ಯೆಯಾಗಿದ್ದು, ಈ ಸಂಬಂಧ ಈತನ ಪತ್ನಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಘಟನೆ ವಿವರ:
    ನಬೀಕುಲ್ ಇಸ್ಲಾಂ ದಂಪತಿ ಗೌಡರಹಳ್ಳಿಯ ಆಲೆಮನೆಯೊಂದರಲ್ಲಿ ಉದ್ಯೋಗಕ್ಕೆ ಬಂದು ಇಲ್ಲಿಯೇ ನೆಲೆಸಿದ್ದು, ದಂಪತಿ ಮನೆಯಲ್ಲಿದ್ದಾಗ ೨೨.೦೭.೨೦೧೯ರಂದು ರಾತ್ರಿ  ಸುಮಾರು ೧.೩೦ರ ಸಮಯದಲ್ಲಿ ಮನ್ಸೂರ್ ಅಲಿಖಾನ್ ಮನೆಯ ಹಂಚನ್ನು ತೆಗೆದು ಒಳಗೆ ನುಗ್ಗಿ ನಬೀಕುಲ್ ಇಸ್ಲಾಂ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ತಡೆಯಲು ಹೋದಾಗ ನಬೀಕುಲ್ ಇಸ್ಲಾಂ ತಲೆಗೆ ಮರದ ರೀಫರ್‌ನಿಂದ ಹೊಡೆದು ತೀವ್ರ ಗಾಯಗೊಳಿಸಿ ಪರಾರಿಯಾಗಿದ್ದನು.  ನಬೀಕುಲ್ ಇಸ್ಲಾಂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ೨೩.೦೭.೨೦೧೯ರಂದು ಬೆಳಗಿನ ಸಮಯದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ದೂರು ದಾಖಲಾದ ಹಿನ್ನಲೆಯಲ್ಲಿ ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಕೆ.ಎಂ ಯೋಗೇಶ್ ಪ್ರಕರಣದ ತನಿಖೆ ಕೈಗೊಂಡು ಆರೋಪಿ ಮನ್ಸೂರ್ ಆಲಿಖಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್.ವೈ ಶಶಿಧರ್ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರು. ೨೦,೦೦೦ ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ೩ ವರ್ಷ ಸಾದಾ ಸಜೆ ಮತ್ತು ಕಲಂ ೪೫೦ರ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ೩ ವರ್ಷ ಕಠಿಣ ಸಜೆ ಮತ್ತು ರು. ೧೦,೦೦೦ ದಂಡ ಹಾಗು ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ೨ ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ರತ್ನಮ್ಮ ವಾದ ಮಂಡಿಸಿದ್ದರು.

No comments:

Post a Comment