ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
ಭದ್ರಾವತಿ, ಜ. ೧: ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನಲ್ಲಿ ಅಚಲವಾದ ನಂಬಿಕೆ ಹೊಂದಿ ಮಾಡುವ ಕಾರ್ಯಗಳಿಂದ ಭಗವಂತ ಪ್ರಸನ್ನನಾಗಿ ಸದಾ ಸಂರಕ್ಷಿಸುತ್ತಾನೆ ಎಂದು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.
ಅವರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಹರಿಸರ್ವೋತ್ತಮ ತತ್ವದಲ್ಲಿ ನಂಬಿಕೆ ಹೊಂದಿ ಕಾಯಾ, ವಾಚ, ಮನಸ ಮಾಡುವ ತ್ರಿವಿಧ ಸೇವಾಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ನಿಜವಾದ ಶರಣಾಗತಿ. ಭಗವಂತ ಸರ್ವತಂತ್ರ ಸ್ವತಂತ್ರ, ನಾನು ಪರಾಧಿನ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಂಡು ಭಗವಂತನ ಸೇವೆ ಎಂದು ಮಾಡುವ ಕಾರ್ಯಗಳಿಂದ ಆ ಭಗವಂತ ಸದಾ ಸಂತುಷ್ಟನಾಗಿ ನಮ್ಮನ್ನು ಕಾಯುತ್ತಾನೆ. ಭಗವಂತನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿ ಯಾವುದೇ ಫಲಪೇಕ್ಷೆರಹಿತವಾಗಿ ಮಾಡುವ ಕಾರ್ಯಗಳಿಗೆ ಅವರವರ ಯೋಗ್ಯತಾನುಸಾರವಾದ ಸ್ಥಾನಮಾನಗಳನ್ನು ಖಂಡಿತ ನೀಡಿ ರಕ್ಷಿಸುತ್ತಾನೆ. ಶ್ರೀಮಧ್ವಾಚಾರ್ಯಾರ ತತ್ವಸಿದ್ಧಾಂತಗಳಲ್ಲಿನ ಈ ಅಂಶವನ್ನು ಪ್ರತಿಯೊಬ್ಬರೂ ಅರಿತುಕೊಂಡು ಬದುಕುಬೇಕೆಂದರು.
ಶ್ರೀ ಗುರು ರಾಘವೇಂದ್ರಸ್ವಾಮಿಗಳು ಸೇರಿದಂತೆ ಪಂಚಯತಿಗಳ ಬೃಂದಾವನಕ್ಕೆ ಶ್ರಿಗಳು ಆರತಿಬೆಳಗಿ, ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಮಠದ ಅರ್ಚಕ ಮುರಳೀಧರ್, ಪಂಡಿತರಾದ ಘಂಟಿನಾರಾಯಣಾಚಾರ್. ಗೋಪಾಲಾಚಾರ್, ರಾಮಚಂದ್ರಕಲ್ಲಾಪುರ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.
No comments:
Post a Comment