Wednesday, January 12, 2022

ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಿ, ವಿತರಕರ ಬೇಡಿಕೆಗಳನ್ನು ಈಡೇರಿಸಿ : ಟಿ. ಕೃಷ್ಣಪ್ಪ

ಭದ್ರಾವತಿ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭವನ್ನು ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಉದ್ಘಾಟಿಸಿದರು.  
    ಭದ್ರಾವತಿ, ಜ. ೧೨: ಸರ್ಕಾರ ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ವಿತರಕರ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಹಿತಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಆಗ್ರಹಿಸಿದರು.
    ಅವರು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜ್ಯದಲ್ಲಿ ಬಯೋಮೆಟ್ರಿಕ್ ಪದ್ದತಿಯಿಂದಾಗಿ ಪಡಿತರ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಪ್ರಮುಖವಾಗಿ ಸರ್ವರ್ ಸಮಸ್ಯೆ ಇದ್ದು, ಹಲವಾರು ಬಾರಿ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಪದ್ದತಿಯನ್ನು ರದ್ದುಪಡಿಸಿ ಈ ಹಿಂದಿನಂತೆ ಓಟಿಪಿ ಅಥವಾ ಚೆಕ್‌ಲಿಸ್ಟ್ ಪದ್ದತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಈ ಹಿಂದಿನ ಪದ್ದತಿಯಲ್ಲಿ ಕೆಲವು ವಿತರಕರು ಅಕ್ರಮ ವೆಸಗಿದ್ದಾರೆಂದು ಇಡೀ ವಿತರಕರನ್ನು ಗುರಿಯಾಗಿಸಿಕೊಂಡು ಪದ್ದತಿಯನ್ನು ಬದಲಿಸುವುದು ಸರಿಯಾದ ಕ್ರಮವಲ್ಲ. ಬದಲಿಗೆ ಅಕ್ರಮ ವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಎಲ್ಲವೂ ಸರಿಯಾಗುತ್ತದೆ ಎಂದರು.
    ಕೇರಳ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ಹೆಚ್ಚಿನ ಕಮಿಷನ್ ನೀಡಲಾಗುತ್ತಿದ್ದು, ಅಲ್ಲದೆ ಪಡಿತರ ವಿತರಣೆಯೊಂದಿಗೆ ದಿನ ಬಳಕೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ. ಇದೆ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ಕಲ್ಪಿಸಿಕೊಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಇಂದಿನ ಸರ್ಕಾರ ವಿತರಕರಿಗೆ ನಿಗದಿತ ಸಮಯದಲ್ಲಿ ಕಮಿಷನ್ ಹಣ ಜಮಾ ಮಾಡದೆ ಬಾಕಿ ಉಳಿಸಿಕೊಂಡಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ವಿತರಕರು ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ತಕ್ಷಣ ಕಮಿಷನ್ ಬಾಕಿ ನೀಡಬೇಕೆಂದು ಆಗ್ರಹಿಸಿದರು.
    ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ಪರಮೇಶ್ವರಪ್ಪ, ಕೆ. ಈಶ್ವರಾಚಾರಿ, ಎಸ್.ಆರ್ ನಾಗರಾಜ್, ಜವರಾಯಿ, ರಾಜೇಶ್, ಕೆ. ನಾಗರಾಜ್, ಕೆ. ಲಕ್ಷ್ಮೀಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



No comments:

Post a Comment