ಭದ್ರಾವತಿ, ಫೆ. ೧೬: ನಗರದ ಅಮೀರ್ ಜಾನ್ ಕಾಲೋನಿಯಲ್ಲಿರುವ ಸಿ.ಎಂ ಇಬ್ರಾಹಿಂರವರ ಸಹೋದರ ಸಿ.ಎಂ ಖಾದರ್ ನಿವಾಸದಲ್ಲಿ ನಗದು ಹಣ ಸೇರಿದಂತೆ ಒಟ್ಟು ಸುಮಾರು ೨೩ ಲಕ್ಷ ರು. ಮೌಲ್ಯದ ಸ್ವತ್ತು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಸಿ.ಎಂ ಖಾದರ್ ಕುಟುಂಬ ಸದಸ್ಯರೊಂದಿಗೆ ಜ.೫ರಂದು ದುಬೈಗೆ ತೆರಳಿದ್ದು, ಈ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಖಾದರ್‌ರವರ ಕಾರಿನ ಚಾಲಕ ಕೇಶವ ಹಾಗು ಇವರ ಕಛೇರಿಯಲ್ಲಿ ಕೆಲಸ ಮಾಡುವ ಹುಡುಗ ಮುಬಾರಕ್ ಫೆ.೧೩ರಂದು ಬೆಳಿಗ್ಗೆ ಖಾದರ್‌ರವರಿಗೆ ಮೊಬೈಲ್ ಕರೆ ಮಾಡಿ ನಿವಾಸದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ಸಂಜೆ ವೇಳೆಗೆ ದುಬೈಯಿಂದ ನಗರಕ್ಕೆ ಆಗಮಿಸಿದ ಖಾದರ್‌ರವರು ಪರಿಶೀಲನೆ ನಡೆಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಮನೆಯ ಕಿಟಕಿಯ ಗ್ರಿಲ್ ಕಿತ್ತು ಹಾಕಿ, ಹಿಂಭಾಗದ ಬಾಗಿಲು ಮೂಲಕ ಪ್ರವೇಶಿಸಿ ಕಳ್ಳತನ ಮಾಡಿರುವುದು ಕಂಡು ಬಂದಿದೆ. ಅಡಕೆ ಮಾರಾಟ ಮಾಡಿ ತಂದಿಡಲಾಗಿದ್ದ ೧೬,೫೦,೦೦೦ ಮತ್ತು ಇವರ ತಮ್ಮನ ಕೊಠಡಿಯಲ್ಲಿದ್ದ ೪೫,೦೦೦ ಸೇರಿ ಒಟ್ಟು ೧೬,೯೫,೦೦೦ ರು. ನಗದು, ಒಟ್ಟು ೪೦ ಸಾವಿರ ರು. ಮೌಲ್ಯದ ೨ ಎಲ್‌ಇಡಿ ಟಿ.ವಿ, ೩೫ ಗ್ರಾಂ ತೂಕದ ಒಟ್ಟು ೧,೭೫,೦೦೦ ರು. ಮೌಲ್ಯದ ಬಂಗಾರದ ಮಾಂಗಲ್ಯ ಸರ, ಒಟ್ಟು ೪,೦೦,೦೦೦ ರು. ಮೌಲ್ಯದ ಒಟ್ಟು ೯೦ ಗ್ರಾಂ ತೂಕದ ೬ ಬಂಗಾರದ ಬಳೆಗಳನ್ನು ಹಾಗು ಒಟ್ಟು ೨೫,೦೦೦ ರು. ಮೌಲ್ಯದ ಒಟ್ಟು ೪ ಮೊಬೈಲ್ ಸೇರಿದಂತೆ ಒಟ್ಟು ೨೩,೩೫,೦೦೦ ರು. ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಖಾದರ್ ದೂರು ದಾಖಲಿಸಿದ್ದಾರೆ.
No comments:
Post a Comment