ಪ್ರೌಢಶಾಲಾ ವಿದ್ಯಾರ್ಥಿನಿಯರ ಮನವೊಲಿಕೆ, ತರಗತಿಗಳಿಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದ ಕಾಲೇಜು ವಿದ್ಯಾರ್ಥಿನಿಯರು
ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜು.
ಭದ್ರಾವತಿ, ಫೆ. ೧೬: ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ನಗರದಲ್ಲಿ ಬುಧವಾರ ಸಹ ಮುಂದುವರೆದಿದ್ದು, ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ಪ್ರೌಢಶಾಲಾ ವಿಭಾಗದ ೮ ರಿಂದ ೧೦ನೇ ತರಗತಿವರೆಗಿನ ಸುಮಾರು ೭೦ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಸುಮಾರು ೩ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು.
ಎಂದಿನಂತೆ ಕಾಲೇಜಿಗೆ ಆಗಮಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಮುಂದಾಗಿ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಹಾಗು ಇನ್ನಿತರ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡುವ ಜೊತೆಗೆ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ ೧೧ ಕಾಲೇಜು ವಿದ್ಯಾರ್ಥಿನಿಯರು ಮನವೊಲಿಕೆಗೆ ಸ್ಪಂದಿಸದೆ ಮನೆಗಳಿಗೆ ಹಿಂದಿರುಗಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಪತ್ರಿಕೆಯೊಂದಿಗೆ ಮಾತನಾಡಿ, ತಹಸೀಲ್ದಾರ್ ಅವರೊಂದಿಗೆ ನಾವು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೆ ರೀತಿ ಪಕ್ಕದಲ್ಲಿರುವ ಮೌಲಾನ ಆಜಾದ್ ಶಾಲೆಯಲ್ಲೂ ಕ್ರಮ ಕೈಗೊಳ್ಳಲಾಗುವುದು. ಈ ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಬರುವ ಸುಮಾರು ೧೧೫ ವಿದ್ಯಾರ್ಥಿನಿಯರಿದ್ದು, ಎಲ್ಲರೂ ಸಹ ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ದೊಣಬಘಟ್ಟ ಸರ್ಕಾರಿ ಶಾಲೆಯಲ್ಲೂ ಇದೆ ರೀತಿ ಕ್ರಮ ಕೈಗೊಳ್ಳಲಾಗುವುದು. ಗುರುವಾರ ವಿದ್ಯಾರ್ಥಿನಿಯರಿಗೆ ಈ ಸಂಬಂಧ ಅವಕಾಶ ನೀಡಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಮಾತನಾಡಿ, ತಹಸೀಲ್ದಾರ್ ಅವರೊಂದಿಗೆ ನಾವು ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ ಸುಮಾರು ೧೧ ವಿದ್ಯಾರ್ಥಿನಿಯರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ ವಿದ್ಯಾರ್ಥಿನಿಯರ ಮನಸ್ಥಿತಿ ವಿಭಿನ್ನವಾಗಿದ್ದು, ಅವರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎನ್ನುವ ಮೂಲಕ ಮನೆಗಳಿಗೆ ಹಿಂದಿರುಗಿದರು. ಈ ವಿದ್ಯಾರ್ಥಿನಿಯರಿಗೆ ನಾಳೆ ಸಹ ಅವಕಾಶ ನೀಡಲಾಗಿದ್ದು, ತಮ್ಮ ತಮ್ಮ ಪೋಷಕರ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಕಾಲೇಜಿಗೆ ಬರಬಹುದಾಗಿದೆ ಎಂದರು.
ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲಾ-ಕಾಲೇಜುಗಳ ಆವರಣದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದೆ. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಂಚಿಯ ಹೊನ್ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ತರಗತಿಗಳಿಗೆ ಹಾಜರಾಗದೆ ಹಿಂದಿರುಗಿರುವ ಕೆಲವು ವಿದ್ಯಾರ್ಥಿಗಳ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿ ಆ ವಿದ್ಯಾರ್ಥಿನಿಯರಿಗೂ ಕಾಲಾವಾಕಾಶ ನೀಡಲಾಗಿದ್ದು, ಪೋಷಕರ ಜೊತೆ ಚರ್ಚಿಸಲು ಸೂಚಿಸಲಾಗಿದೆ ಎಂದರು.
ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯಕ್, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಉಪಸ್ಥಿತರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
No comments:
Post a Comment