Friday, February 18, 2022

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಅಸ್ತಿತ್ವಕ್ಕೆ

ಫೆ.೨೧ರಂದು ಒಕ್ಕೂಟದ ಲೋಕಾರ್ಪಣೆ, ಕಾರ್ಯಾಲಯ ಉದ್ಘಾಟನೆ


ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಭದ್ರಾವತಿ, ಫೆ. ೧೮: ಕಾರ್ಮಿಕರ ಪರವಾಗಿ ನಮ್ಮ ಹೋರಾಟ ನಿರಂತರವಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಳೆದ ೩ ವರ್ಷಗಳಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.  ಈ ಒಕ್ಕೂಟ ಇದೀಗ ಕಾರ್ಮಿಕ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಾಣಿಯಾಗುವ ಮೂಲಕ ಫೆ.೨೧ರಂದು ಕಛೇರಿಯ ಉದ್ಘಾಟನೆಗೆ ಮುಂದಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ, ಬಡವ, ದೀನದಲಿತರ ಪರವಾಗಿ ಸರ್ಕಾರಿದಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಾರ್ಮಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಈ ಕಾರ್ಮಿಕರಿಗೆ ಇದುವರೆಗೂ ಇಎಸ್‌ಐ ಸೌಲಭ್ಯ ಒದಗಿಸದೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ ಪರವಾಗಿ ಹಾಗು ಕಾರ್ಮಿಕರ ವಿರುದ್ಧವಾಗಿ ಕಾನೂನುಗಳನ್ನು ಜಾರಿಗೆ ತರಲು ಹೊರಟಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
    ಒಕ್ಕೂಟ ಪ್ರಸ್ತುತ ಸುಮಾರು ೫೦೦ ಸದಸ್ಯರನ್ನು ಒಳಗೊಂಡಿದ್ದು, ಸರ್ಕಾರದಿಂದ ಲಭ್ಯವಾದ ಸುರಕ್ಷತಾ ಹಾಗು ಪ್ರತಿರಕ್ಷತಾ ಮತ್ತು ಸಲಕರಣೆ ಕಿಟ್‌ಗಳನ್ನು ವಿತರಿಸಲಾಗಿದೆ. ಕಾರ್ಮಿಕರ ಗುರುತಿನ ಚೀಟಿ, ಇ-ಶ್ರಮ್ ಕಾರ್ಡ್ ನೋಂದಾಣಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಕಲ್ಪಿಸಿಕೊಡಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಒಕ್ಕೂಟ ಕಾರ್ಯಾರಂಭ ಮಾಡಲಿದೆ.  ನೋಂದಾಣಿಗೊಂಡಿರುವ ಒಕ್ಕೂಟವನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಫೆ. ೨೧ರಂದು ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದ ಕಟ್ಟಡದಲ್ಲಿ ತೆರೆಯಲಾಗಿರುವ ಕಾರ್ಯಾಲಯದಲ್ಲಿ ಲೋಕಾರ್ಪಣೆಗೊಳಿಸಲಿದ್ದು, ಸಮಾರಂಭಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ.
    ಕಾರ್ಯಾಲಯವನ್ನು ಕಾರ್ಮಿಕ ಅಧಿಕಾರಿ ಸಿ.ಬಿ ರಂಗಯ್ಯ ಮತ್ತು ಶಾಶ್ವತ ನಾಮಫಲಕವನ್ನು ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್ ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಿದ್ದು, ಡಿಎಸ್‌ಎಸ್ ಮುಖಂಡ ಸತ್ಯ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಶಶಿಕುಮಾರ್, ಎನ್. ವೆಂಕಟೇಶ್, ಬಿ. ರಾಜಾಚಾರಿ, ಪ್ರಧಾನ ಕಾರ್ಯದರ್ಶಿ ಎಂ. ಕಂದನ್, ಕಾರ್ಯದರ್ಶಿ ಎಸ್. ಕುಮಾರ್, ಸಹ ಕಾರ್ಯದರ್ಶಿಗಳಾದ ಬಿ.ಎಸ್. ಸುಶೀಲ, ಎಸ್. ವೆಂಕಟೇಶ್, ಖಜಾಂಚಿ ಚೆಲುವರಾಜ್, ನಿರ್ದೇಶಕರಾದ ಪಿ. ಏಳುಮಲೈ, ಬಿ.ಆರ್ ಯಲ್ಲಪ್ಪ, ಸುಬ್ರಮಣಿ, ಎನ್. ವಸಂತಕುಮಾರ್, ಎ. ಶಶಿಕುಮಾರ್, ವಿ. ಅರವಿಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ದೊರೈ, ಶ್ರೀನಿವಾಸ್, ಎಚ್. ನಿಂಗರಾಜ್, ಎಂ. ಪವಿತ್ರ, ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ಅರುಳ್, ಉಪಾಧ್ಯಕ್ಷರಾದ ಎಂ. ಸುಧಾಕರ್, ಟಿ. ವಡಿವೇಲು, ಪ್ರಧಾನ ಕಾರ್ಯದರ್ಶಿ ಎಸ್. ರಾಮು, ನಿರ್ದೇಶಕರಾದ ಕೆ. ಅಶೋಕ್, ಕೆ. ಶ್ರೀನಿವಾಸ, ಬಸವರಾಜ, ಎಸ್. ನಾಗರಾಜ, ಎನ್. ಸುರೇಶ್ ಮತ್ತು ರಾಧಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment