ಸಂಸದ ಬಿ.ವೈ ರಾಘವೇಂದ್ರ ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದರು.
ಭದ್ರಾವತಿ, ಫೆ. ೧೫ : ಸಂಸದ ಬಿ.ವೈ ರಾಘವೇಂದ್ರ ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದರು.
ಕಾಮಗಾರಿ ಪ್ರಗತಿ ಪರಿಶೀಲಿಸಿದ ಸಂಸದರು, ಕಾಮಗಾರಿ ತಕ್ಷಣ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಸ್ಥಳೀಯರಿಗೆ ಉಂಟಾಗುತ್ತಿರುವ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು.
ಹಲವು ವರ್ಷಗಳ ಬೇಡಿಕೆಯಂತೆ ರೈಲ್ವೆ ಮೇಲ್ಸೇತುವೆ ಮಂಜೂರಾತಿ ಮಾಡಿಸಿಕೊಡುವಲ್ಲಿ ಸಂಸದ ಬಿ.ವೈ ರಾಘವೇಂದ್ರ ಯಶಸ್ವಿಯಾಗಿದ್ದು, ಕೆಲವು ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿದೆ. ಮೆ|| ಎಸ್‌ಆರ್‌ಸಿ ಕಂಪನಿ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್, ಹೈದರಬಾದ್ ರವರಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜ.೧೬ರಂದು ದ್ವಿಚಕ್ರ ವಾಹನ ಹೊರತುಪಡಿಸಿ ಇತರೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿ ಆದೇಶ ಹೊರಡಿಸಿದ್ದರು. ಇದಕ್ಕೂ ಮೊದಲು ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಬೇರೆಡೆ ನಿವೇಶನ ಮಂಜೂರಾತಿ ಮಾಡುವ ಜೊತೆಗೆ ಭೂ ಪರಿಹಾರ ಸಹ ನೀಡಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮೊದಲ ಬಾರಿಗೆ ಸಂಸದರು ಖುದ್ದಾಗಿ ಕಾಮಗಾರಿ ವೀಕ್ಷಿಸಿದರು.
ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಜೆ ನಾಗರಾಜ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಕೆ. ಪರಮೇಶ, ಕಂದಾಯ, ಲೋಕೋಪಯೋಗಿ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
“೨ ವರ್ಷದ ಅವಧಿಯಲ್ಲಿ ಸುಮಾರು ೨೬ ಕೋ.ರು. ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳಿಸಲು ಟೆಂಡರ್‌ನಲ್ಲಿ ಸೂಚಿಸಲಾಗಿದೆ. ಸ್ಥಳೀಯರ ಮನವಿ ಮೇರೆಗೆ ಕಾಮಗಾರಿಯನ್ನು ಸಾಧ್ಯವಾದಷ್ಟು ೧ ವರ್ಷದ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ಹಾಗು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಮತ್ತು ಪ್ರಾಥಮಿಕ ಹಂತದ ನೆಲಮಟ್ಟದ ಕಾಮಗಾರಿಯನ್ನು ಮುಂದಿನ ೩-೪ ತಿಂಗಳಲ್ಲಿ ಮುಕ್ತಾಯಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ. ಈ ಭಾಗದಲ್ಲಿ ಕೇವಲ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದ್ದು, ಸಾರ್ವಜನಿಕರು ಕಾಮಗಾರಿ ಯಶಸ್ವಿಯಾಗಿ ಮುಕ್ತಾಯಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ.
- ಬಿ.ವೈ. ರಾಘವೇಂದ್ರ, ಲೋಕಸಭಾ ಸದಸ್ಯರು, ಶಿವಮೊಗ್ಗ
No comments:
Post a Comment