Thursday, March 10, 2022

ಮಾ.೧೧ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಲಿರುವ ಗೀತಾ ರಾಜ್‌ಕುಮಾರ್

೨೦೧೩ರಿಂದ ಮಹಿಳಾ ಅಧ್ಯಕ್ಷರಿಂದಲೇ ಬಜೆಟ್ ಮಂಡನೆ


ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್
    ಭದ್ರಾವತಿ, ಮಾ. ೧೦: ನಗರಸಭೆಯಲ್ಲಿ ಜನಪ್ರತಿನಿಧಿ ಆಡಳಿತ ಸುಮಾರು ೨ ವರ್ಷಗಳ ನಂತರ ಅಸ್ತಿತ್ವಕ್ಕೆ ಬಂದು ಕಳೆದ ಸುಮಾರು ೫ ತಿಂಗಳಿನಿಂದ ಕಾಂಗ್ರೆಸ್ ಅಧಿಕಾರ ಮುನ್ನಡೆಸಿಕೊಂಡು ಬರುತ್ತಿದ್ದು, ಇದೀಗ ಮೊದಲ ಬಜೆಟ್ ಮಂಡನೆ ಮಾ.೧೧ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.
    ಈ ಹಿಂದೆ ಕಳೆದ ೨ ಅವಧಿಯಲ್ಲಿ ಅಧಿಕಾರಿಗಳು ಬಜೆಟ್ ಮಂಡಿಸಿದ್ದರು. ಆದರೆ ಈ ಬಜೆಟ್ ಮಂಡನೆಗಳು ಹೆಚ್ಚಿನ ಗಮನ ಸೆಳೆದಿರಲಿಲ್ಲ. ಅಲ್ಲದೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಬಜೆಟ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ಇದೀಗ ಜನಪ್ರತಿನಿಧಿ ಆಡಳಿತ ಬಜೆಟ್ ಮಂಡಿಸುತ್ತಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಲ್ಲದೆ ೨೦೧೩ರಿಂದ ಮಹಿಳಾ ಅಧ್ಯಕ್ಷರೇ ಬಜೆಟ್ ಮಂಡಿಸಿಕೊಂಡು ಬರುತ್ತಿರುವುದು ವಿಶೇಷತೆಯಾಗಿದೆ.
    ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಲವಾರು ಮೂಲ ಸೌಲಭ್ಯಗಳ ಕೊರತೆ ಕಂಡು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಸದಸ್ಯರು ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಈ ಬಾರಿ ಬಜೆಟ್ ಮಂಡನೆಯಲ್ಲಿ ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು ನಗರದ ಬೆಳವಣಿಗೆಗೆ ಪೂರಕವಾದ ಹಲವಾರು ಸಲಹೆ-ಸೂಚನೆಗಳನ್ನು ಸಹ ನೀಡಿವೆ. ಗೀತಾ ರಾಜ್‌ಕುಮಾರ್‌ರವರು ಉತ್ತಮ ಬಜೆಟ್ ಮಂಡನೆ ಮಾಡಲಿದ್ದಾರೆಂಬ ನಿರೀಕ್ಷೆ ಹೊಂದಲಾಗಿದೆ.
    ಕೋವಿಡ್ ಹಿನ್ನಲೆಯಲ್ಲಿ ಕಳೆದ ೨ ಅವಧಿಯಲ್ಲಿ ನಗರಸಭೆ ಆದಾಯ ಸಹ ಸ್ವಲ್ಪಮಟ್ಟಿಗೆ ಕುಂಠಿತವಾಗಿದ್ದು, ಇದೀಗ ಆದಾಯ ಕ್ರೋಢೀಕರಣದ ಜೊತೆಗೆ ಹಲವು ಹೊಸ ಯೋಜನೆಗಳೊಂದಿಗೆ ಉಳಿತಾಯ ಬಜೆಟ್ ಮಂಡಿಸುವುದು ಸವಾಲಿನ ಕೆಲಸವಾಗಿದೆ. ಇದನ್ನು ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಯಾವ ರೀತಿ ನಿಭಾಯಿಸುತ್ತಾರೆಂಬುದು ಕುತೂಹಲಕಾರಿಯಾಗಿದೆ.    

No comments:

Post a Comment