ಭದ್ರಾವತಿ ಸಿದ್ಧರೂಢ ನಗರದ ಶ್ರೀ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ 'ನಾ ಕಂಡ ಪೌರಾಯುಕ್ತರು' ಅಭಿನಂದನ ಕೃತಿ ಬಿಡುಗಡೆ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
ಭದ್ರಾವತಿ, ಮಾ. ೨೭: ಸರ್ಕಾರಿ ಹುದ್ದೆಯಲ್ಲಿರುವವರು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವುದು ಬಹಳ ವಿರಳ. ಪೌರಾಯುಕ್ತರಾಗಿ ಜನರು ಮೆಚ್ಚುವ ರೀತಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಮನೋಹರ್‌ರವರು ದೇಶದ ಭವಿಷ್ಯದ ರತ್ನವಾಗಿ ಉಳಿದುಕೊಳ್ಳುವ ವಿಶ್ವಾಸವಿದೆ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಡಾ. ವಿ ಸುದೇಶ್ ಹೇಳಿದರು.
ಅವರು ಭಾನುವಾರ ಸಿದ್ಧರೂಢ ನಗರದ ಶ್ರೀ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ 'ನಾ ಕಂಡ ಪೌರಾಯುಕ್ತರು' ಅಭಿನಂದನ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನೋಹರ್ ಅವರ ವಿದ್ಯಾರ್ಥಿ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಭದ್ರಾವತಿಯಲ್ಲಿ ಪೌರಾಯುಕ್ತರಾಗಿ ಜನ ಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಅವರ ಮನಸ್ಸಿನಲ್ಲಿ ಉಳಿದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಬಹುತೇಕ ಅಧಿಕಾರಿಗಳು ಸರ್ಕಾರಿ ಹುದ್ದೆಯಲ್ಲಿ ವೈಯಕ್ತಿಕ ಲಾಭದ ನಿರೀಕ್ಷೆಯನ್ನು ಹೊಂದಿರುತ್ತಾರೆ. ಆದರೆ ಮನೋಹರ್‌ರವರು ಹುದ್ದೆಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳದೆ ಕರ್ತವ್ಯವನ್ನು ಸೇವಾ ಮನೋಭಾವದೊಂದಿಗೆ ನಿರ್ವಹಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಇವರು ಕೇವಲ ಭದ್ರಾವತಿ ನಗರದ ಜನರಿಗೆ ಮಾತ್ರ ರತ್ನವಾಗಿ ಉಳಿದಿಲ್ಲ ದೇಶದ ರತ್ನವಾಗಿ ಉಳಿದುಕೊಂಡಿದ್ದಾರೆ ಎಂದರು.
ಚಲನಚಿತ್ರ ನಟಿ, ಮಿಸ್ ಸುಪ್ರ ನ್ಯಾಷನಲ್ ೨೦೧೪ರ ವಿಜೇತೆ ಆಶಾ ಭಟ್ ಮಾತನಾಡಿ, ನಮ್ಮೆಲ್ಲರ ಸಾಧನೆಗೆ ನಮ್ಮೂರಿನ ಕೊಡುಗೆ ಅಪಾರವಾಗಿದೆ. ಇಲ್ಲಿನ ಜನರು ಕಲಾವಿದರು ಸೇರಿದಂತೆ ಎಲ್ಲಾ ಕ್ಷೇತ್ರದವರಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಉತ್ತಮ ಅಧಿಕಾರಿಯಾಗಿರುವ ಮನೋಹರ್‌ರವರು ನಮ್ಮೂರಿನಲ್ಲಿ ಸೇವೆ ಸಲ್ಲಿಸಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದೆ ಎಂದರು.
ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಮಾತನಾಡಿ, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಆ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮನೋಹರ್ ಸಹ ಒಬ್ಬರಾಗಿದ್ದು, ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯದಲ್ಲಿ ನಿಷ್ಠೆ ತೋರಿಸುವ ಮೂಲಕ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿ, ಮನೋಹರ್ ಕರ್ತವ್ಯಕ್ಕೆ ಹೆಚ್ಚಿನ ಮಾನ್ಯತೆ ನೀಡಿದವರು. ಕೆಳವರ್ಗದ ಜನರ ನೋವುಗಳನ್ನು ಅರಿತುಕೊಂಡವರು. ಅವರೊಂದಿಗೆ ನಾನು ಸಹ ಒಬ್ಬರು ಎಂಬಂತೆ ಕಾಯಕದಲ್ಲಿ ತೊಡಗಿಸಿಕೊಂಡವರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಇಂತಹ ಅಧಿಕಾರಿಗಳು ಅಪರೂಪ ಎಂದರು.
ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 'ನಾ ಕಂಡ ಪೌರಾಯುಕ್ತರು' ಕೃತಿ ರಚಿಸಲು ಉಂಟಾದ ಪ್ರೇರಣೆಗಳು, ಆಶಯಗಳನ್ನು ವಿವರಿಸಿದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚಲನಚಿತ್ರ ನಟ, ನಿರ್ದೇಶಕ, ಜಾದೂ ಮಾಂತ್ರಿಕ ಎಂ.ಡಿ ಕೌಡಿಕ್ ವಿಶಿಷ್ಟವಾಗಿ ಜಾದೂ ಮೂಲಕ ಉದ್ಘಾಟನೆ ನೆರವೇರಿಸಿಕೊಟ್ಟರು.
ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸ್ವಾಗತಿಸಿದರು. ಮಮತಾ ಬಿ. ನವೀನ್ ನಿರೂಪಿಸಿದರು.
No comments:
Post a Comment