Sunday, March 6, 2022

ಅಗಮುಡಿ ಸಮುದಾಯಕ್ಕೆ ಒಬಿಸಿ ಮೀಸಲಾತಿಗೆ ಪ್ರಧಾನಿಗೆ ಪತ್ರ : ಬಿಎಸ್‌ವೈ

೨೫ನೇ ವರ್ಷದ ರಜತ ಮಹೋತ್ಸವ, ಸಮುದಾಯ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಭರವಸೆ

ಭದ್ರಾವತಿ ಗಾಂಧಿನಗರದಲ್ಲಿ ಭಾನುವಾರ ಜರುಗಿದ ಅಗಮುಡಿ ಮೊದಲಿಯರ್ ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಮಾ. ೬: ಅಗಮುಡಿ ಸಮುದಾಯದವರಿಗೆ ಒಬಿಸಿ ಮೀಸಲಾತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.
ಅವರು ಭಾನುವಾರ ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
    ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರು ಮತ್ತು ತಮಿಳು ಸಮುದಾಯದವರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ನನ್ನ ಅಧಿಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್‌ರವರ ಪ್ರತಿಮೆ ಹಾಗು ತಮಿಳುನಾಡು ಚೆನ್ನೈನಲ್ಲಿ ರನ್ನರವರ ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು. ತಮಿಳು ಸಮುದಾಯದವರು ನನ್ನ ಮೇಲೆ ಅತ್ಯಂತ ವಿಶ್ವಾಸ ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಸಮುದಾಯದವರ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಜೊತೆಗೆ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
    ಶ್ರೀ ಕ್ಷೇತ್ರ ಭದ್ರಗಿರಿ ಅಭಿವೃದ್ಧಿ ಜೊತೆಗೆ ಶ್ರೀಗಳ ಆಶೀರ್ವಾದದೊಂದಿಗೆ ಸಮುದಾಯ ಭವನ ಸಹ ಹಂತ ಹಂತವಾಗಿ ಅಭಿವೃದ್ಧಿಗೊಳಿಸುವಲ್ಲಿ ಸಮುದಾಯದ ಆನೇಕ ಮಹನೀಯರ ಶ್ರಮ ಹೆಚ್ಚಿನದ್ದಾಗಿದೆ. ಇವರೆಲ್ಲರನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಇದೀಗ ಸಮುದಾಯಭವನದ ಲೋಕಾರ್ಪಣೆ ನೆರವೇರಿಸಲು ನನಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.



    ಅಗಮುಡಿ ಮೊದಲಿಯರ್ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಸಮುದಾಯದ ಎಲ್ಲರ ಪರಿಶ್ರಮದಿಂದಾಗಿ ಹಾಗು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಜಯೇಂದ್ರ ಸೇರಿದಂತೆ ಇನ್ನಿತರರ ಸಹಕಾರದಿಂದಾಗಿ ಇದೀಗ ನಮ್ಮ ಸಮುದಾಯಕ್ಕೂ ಒಂದು  ಸುಸಜ್ಜಿತವಾದ ಸಮುದಾಯ ಭವನ ಹೊಂದಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಗಮುಡಿ ಸಮುದಾಯದ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ರಾಜ್ಯದಲ್ಲಿ ೨ ಉಪ ಪಂಗಡಗಳನ್ನು ಹೊಂದಿದೆ. ನೂರಾರು ವರ್ಷಗಳಿಂದ ರಾಜ್ಯದಲ್ಲಿಯೇ ನೆಲೆಸಿರುವ ಸಮುದಾಯವರ ಏಳಿಗೆಗಾಗಿ ಒಬಿಸಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿದರು.
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ವಿ. ಕದಿರೇಶ್, ವಿಜಯ, ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ. ಸುರೇಶ್‌ಕುಮಾರ್, ಶ್ರೀ ಭದ್ರಗಿತಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್, ಸಂಘದ ಕಾರ್ಯದರ್ಶಿ ಪಿ. ದೊರೈ ಮತ್ತು ಎಂ. ಸುಬ್ರಮಣಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

No comments:

Post a Comment