ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಮೈಸೂರು ಕಾಗದ ಕಾರ್ಖಾನೆ ಪುನಃಶ್ಚೇತನಗೊಳಿಸುವಲ್ಲಿ ದಿವ್ಯ ನಿರ್ಲಕ್ಷ್ಯ
ಮೈಸೂರು ಕಾಗದ ಕಾರ್ಖಾನೆ ಸಕ್ಕರೆ ಘಟಕಕ್ಕೆ ಕಬ್ಬು ಪೂರೈಸುವ ಮಾರ್ಗ.
* ಅನಂತಕುಮಾರ್
ಭದ್ರಾವತಿ, ಮಾ. ೪: ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ನಗರದ ಮೈಸೂರು ಕಾಗದ ಕಾರ್ಖಾನೆಯ ಕೋಟ್ಯಾಂತರ ರು. ಮೌಲ್ಯದ ಯಂತ್ರಗಳು ಈಗಾಗಲೇ ಶೇ.೭೦ರಷ್ಟು ತುಕ್ಕು ಹಿಡಿದಿದ್ದು, ಗುಜರಿ ಸೇರುವುದು ಬಹುತೇಕ ಖಾತರಿಯಾದಂತೆ ಕಂಡು ಬರುತ್ತಿದೆ. ಈ ಬಾರಿ ಬಜೆಟ್‌ನಲ್ಲೂ ಕಾರ್ಖಾನೆ ಕುರಿತು ಪ್ರಸ್ತಾಪಿಸದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
ಸುಮಾರು ೭ ದಶಕಗಳಿಗೂ ಹೆಚ್ಚಿನ ಭವ್ಯ ಪರಂಪರೆಯನ್ನು ಹೊಂದಿರುವ ಬೃಹತ್ ಕಾರ್ಖಾನೆಯ ಯಂತ್ರಗಳು ಸ್ಥಗಿತಗೊಂಡು ಸುಮಾರು ೭ ವರ್ಷಗಳು ಕಳೆದಿವೆ. ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭವಿಷ್ಯ ಆಲೋಚನೆಯೊಂದಿಗೆ, ಭಾರತರತ್ನ, ಶ್ರೇಷ್ಠ ತಂತ್ರಜ್ಞಾನಿ ಸರ್.ಎಂ. ವಿಶ್ವೇಶ್ವರಾಯ ಹಾಗು ದಿವಾನ್ ಸರ್ ಮಿರ್ಜಾಇಸ್ಮಾಯಿಲ್‌ರವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯಲ್ಲಿ ಇಂದು ಯಂತ್ರಗಳ, ಕಟ್ಟಡಗಳ ಪಳೆಯುಳಿಕೆಗಳು ಕಂಡು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ಯಾವುದೇ ನಿರ್ಧಾರ ಕೈಗೊಳ್ಳದೆ ಸರ್ಕಾರ ಮೌನಕ್ಕೆ ಶರಣಾಗಿರುವುದು ನಿಜಕ್ಕೂ ದಿವ್ಯ ನಿರ್ಲಕ್ಷ್ಯವಾಗಿದೆ ಎಂದರೆ ತಪ್ಪಾಗಲಾರದು.
ಶಶಿಕುಮಾರ್ ಎಸ್. ಗೌಡ
ಸರ್ಕಾರ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಲು ಸಿದ್ದವಿದೆ. ಆದರೆ ಎಂಪಿಎಂ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಿ ಪುನಃ ಆರಂಭಿಸಲು ಮುಂದೆ ಬರುತ್ತಿಲ್ಲ. ಈಗಾಗಲೇ ಎಂಪಿಎಂ ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿದಿವೆ. ಕಟ್ಟಡಗಳು ಶಿಥಿಲಗೊಂಡಿವೆ. ಕೋಟ್ಯಾಂತರ ರು. ಮೌಲ್ಯದ ಆಸ್ತಿಪಾಸ್ತಿಗಳು ಲೂಟಿಯಾಗಿವೆ. ಈ ಹಿನ್ನಲೆಯಲ್ಲಿ ಈ ಕಾರ್ಖಾನೆಯನ್ನು ಟೆಂಡರ್ ಮೂಲಕ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಪರ್ಯಾಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಐಟಿ ಕಂಪನಿ ಇನ್ನೂ ಬೆಳವಣಿಗೆ ಕಂಡಿಲ್ಲ. ಕೈಗಾರಿಕಾ ಪ್ರದೇಶ ಸಾಕಷ್ಟು ಅಭಿವೃದ್ಧಿಗೊಳ್ಳಬೇಕಾಗಿದೆ. ಯಾವುದನ್ನೂ ಸಹ ಕೈಗೊಳ್ಳದೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ಯಾವುದೇ ಬೆಳವಣಿಗೆ ಸಾದ್ಯವಿಲ್ಲ.
-ಶಶಿಕುಮಾರ್ ಎಸ್. ಗೌಡ, ರಾಜ್ಯ ಕಾರ್ಯದರ್ಶಿ, ಜೆಡಿಯು.
ಕ್ಷೇತ್ರದಲ್ಲಿಯೇ ನೆಲೆ ಕಂಡುಕೊಂಡಿರುವ ಕಾರ್ಮಿಕ ಕುಟುಂಬಗಳು, ನಿರುದ್ಯೋಗಿಗಳು ಪ್ರತಿ ವರ್ಷ ಬಜೆಟ್‌ನಲ್ಲಿ ಕಾರ್ಖಾನೆ ಅಭಿವೃದ್ಧಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಇದುವರೆಗೂ ಯಾವ ಸರ್ಕಾರಗಳು ಸಹ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ದೃಢ ನಿರ್ಧಾರ ಕೈಗೊಂಡಿಲ್ಲ. ಮುಂದೆಯೂ ಕೈಗೊಳ್ಳುವ ನಿರೀಕ್ಷೆಯೂ ಇಲ್ಲ.
ಎಂಪಿಎಂ ವಿಚಾರ ಒಂದೆಡೆ ಇರಲಿ, ಯಾವುದಾದರೂ ಹೊಸ ಕಾರ್ಖಾನೆಯನ್ನಾದರೂ ಆರಂಭಿಸಿ ಕ್ಷೇತ್ರದಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಭರವಸೆಯನ್ನು ಸರ್ಕಾರ ನೀಡುತ್ತಿಲ್ಲ. ನಗರ ಪ್ರದೇಶಕ್ಕೆ ಸಮೀಪದಲ್ಲಿರುವ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಂದಿಷ್ಟು ಬಂಡವಾಳ ಶಾಹಿಗಳಿಗೆ ಕಂಪನಿಗಳನ್ನು ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಬಿಟ್ಟರೇ ಬೇರೇನು ಮಾಡಿಲ್ಲ. ಈ ಕೈಗಾರಿಕಾ ಪ್ರದೇಶವನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಮೈಸೂರು ಕಾಗದ ಕಾರ್ಖಾನೆ
No comments:
Post a Comment