Saturday, March 5, 2022

ಬಸವರಾಜ ಬೊಮ್ಮಾಯಿ ಬಜೆಟ್ ಘೋಷಣೆಗಳು ಅನುಷ್ಠಾನಗೊಳ್ಳುವುದು ಅನುಮಾನ : ಎಚ್.ಎಸ್ ಸುಂದರೇಶ್

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಶಾಸಕ ಬಿ.ಕೆ ಸಂಗಮೇಶ್ವರ್, ಡಿಸಿಸಿ ಬ್ಯಾಂಕ್ ಮಾಜಿ  ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಭದ್ರಾವತಿ, ಮಾ. ೫: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ  ಬಾರಿ ಮಂಡಿಸಿರುವ ಬಜೆಟ್ ಕೇವಲ ಚುನಾವಣೆ ತಂತ್ರಗಾರಿಕೆಯಾಗಿದ್ದು, ಬಜೆಟ್‌ನಲ್ಲಿ ಘೋಷಿಸಿರುವ  ಯೋಜನೆಗಳು ಅನುಷ್ಠಾನಗೊಳ್ಳುವುದು ಬಹುತೇಕ ಅನುಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಸುಂದರೇಶ್ ಹೇಳಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಬಜೆಟ್‌ನಿಂದ ಬಡವರು, ರೈತರು ಮತ್ತು ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಳೆದ ಸುಮಾರು ೩ ವರ್ಷದಿಂದ ಮಹಾಮಾರಿ ಕೊರೋನಾ ಪರಿಣಾಮ ಜನಸಾಮಾನ್ಯರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ನೀಡಿಲ್ಲ. ಅಗತ್ಯ ವಸ್ತುಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿಲ್ಲ. ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆ ರೂಪಿಸಿಲ್ಲ. ಅರ್ಹ ಬಡ ವಸತಿ ರಹಿತರಿಗೆ ಕಳೆದ ಬಜೆಟ್‌ನಲ್ಲಿ ವಸತಿ ಕಲ್ಪಿಸಿಕೊಡಲು ಘೋಷಣೆ ಮಾಡಲಾಗಿದ್ದು, ಆದರೆ ಇದುವರೆಗೂ ಒಂದೇ ಒಂದು ವಸತಿ ನಿರ್ಮಾಣ ಮಾಡಿಲ್ಲ. ಇದೀಗ ಪುನಃ ಹೊಸದಾಗಿ ಹೆಚ್ಚುವರಿ ಮಸತಿಗಳನ್ನು ನಿರ್ಮಿಸುವುದಾಗಿ ಘೋಷಣೆ ಮಾಡಲಾಗಿದೆ. ಶಾಲಾ-ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ  ಈ ಬಾರಿ ಬಜೆಟ್ ಶೂನ್ಯವಾಗಿದ್ದು, ಚುನಾವಣೆ ಉದ್ದೇಶದಿಂದ ಮಂಡಿಸಲಾಗಿರುವ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಘೋಷಿಸಲಾಗಿರುವ ಯಾವುದೇ ಘೋಷಣೆಗಳು ಅನುಷ್ಠಾನಗೊಳ್ಳುವುದಿಲ್ಲ ಎಂದರು.
    ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ :
    ಶಿವಮೊಗ್ಗದಲ್ಲಿ ಯಾವುದೋ ಹಿನ್ನಲೆಯಲ್ಲಿ ನಡೆದಿರುವ  ಹರ್ಷ ಕೊಲೆ ಪ್ರಕರಣವನ್ನು ಬಿಜೆಪಿ ಪಕ್ಷದ ಮುಖಂಡರು ಹಿಂದೂ ಕಾರ್ಯಕರ್ತನ ಕೊಲೆ ಎಂದು ಬಿಂಬಿಸುವ ಮೂಲಕ ಜಿಲ್ಲೆಯಲ್ಲಿ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ.  ವಿನಾಕಾರಣ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಭಯದ ವಾತಾವರಣ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ ಸುಂದರೇಶ್‌ರವರು ಹರ್ಷ ಕೊಲೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಸಹ ಖಂಡಿಸುತ್ತದೆ. ಹರ್ಷ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಬಯಸುತ್ತದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅದರಲ್ಲೂ ಭದ್ರಾವತಿ ತಾಲೂಕಿಗೆ ಶೂನ್ಯ ಕೊಡುಗೆಯಾಗಿದ್ದು, ತಾರತಮ್ಯ ಮಾಡಲಾಗಿದೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಚಾರ ಬಂದಾಗ ಅಭಿವೃದ್ಧಿ, ರಾಜಕೀಯ ಬಂದಾಗ ರಾಜಕಾರಣ ಮಾಡಬೇಕು. ಈ ಬಾರಿ ಬಜೆಟ್ ಕೇವಲ ಘೋಷಣೆ ಮಾತ್ರ ಸೀಮಿತವಾಗಿದೆ ಎಂದರು.
    ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗು ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತಗಳಿಗೆ ಬದ್ಧರಾಗಿ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ ಎಂದರು.
    ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪ್ರಮುಖರಾದ  ಸಿ.ಎಂ ಖಾದರ್, ಶಂಕರಘಟ್ಟ ರಮೇಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

No comments:

Post a Comment