Monday, April 11, 2022

ಹಿರಿಯೂರು ಗ್ರಾಮ ಪಂಚಾಯಿತಿ ಸೂಪರ್ ಸೀಡ್ ಮಾಡಿ : ಡಿಎಸ್ಎಸ್ ಆಗ್ರಹ



 ಭದ್ರಾವತಿ : ಅವ್ಯವಹಾರ ಹಾಗೂ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಮುಂಭಾಗ  ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
       ಗ್ರಾಮ ಪಂಚಾಯಿತಿಯಲ್ಲಿ  ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಮಧುಸೂದನ್ ಅವರು ನಡೆಸಿರುವ ಭ್ರಷ್ಟಾಚಾರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.  ತಕ್ಷಣ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
      ಕಳೆದ ಸುಮಾರು ಒಂದು ವರ್ಷದಿಂದ ಗ್ರಾಮ ಪಂಚಾಯಿತಿ ಆಡಳಿತ ವ್ಯಾಪಕ ಭ್ರಷ್ಟಾಚಾರಕ್ಕೆ ಇಳಿದಿದ್ದು, ಸಾಕಷ್ಟು ಅವ್ಯವಹಾರಗಳು ನಡೆದಿವೆ. ಈ ಕುರಿತು ಸಹ ತಮ್ಮ ಗಮನಕ್ಕೆ ತರಲಾಗಿದೆ ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ತಕ್ಷಣ ಗ್ರಾಮ ಪಂಚಾಯಿತಿ ಆಡಳಿತವನ್ನು ಸೂಪರ್ ಸೀಡ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಹೋರಾಟಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಏಳುಕೋಟಿ, ತಾಲೂಕು ಸಂಚಾಲಕ ರವಿ ನಾಯ್ಕ, ಹಿರಿಯೂರು ಹೋಬಳಿ ಘಟಕ ಸಂಚಾಲಕ ಕೆಟಿ ಪ್ರಸನ್ನ, ಗ್ರಾಮ ಘಟಕ ಸಂಚಾಲಕ ಬಿ ರವಿ, ತಾಲೂಕು ಸಂಘಟನಾ ಸಂಚಾಲಕ ಶಿವನಾಯ್ಕ, ಮಹಿಳಾ ಪ್ರಮುಖರಾದ ಜೀವ, ಶಶಿಕಲಾ, ಬೀರಣ್ಣ, ಸತ್ಯಣ್ಣ, ಕುಮಾರಣ್ಣ ಸೇರಿದಂತೆ ಗ್ರಾಮಸ್ಥರು ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment