Saturday, May 7, 2022

ಗುತ್ತಿಗೆ ಕಾರ್ಮಿಕರೇ ಅಧಿಕವಾಗಿರುವ ಕಾರ್ಖಾನೆಯಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ

ಮೇ.೮ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಚುನಾವಣೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
    * ಅನಂತಕುಮಾರ್
    ಭದ್ರಾವತಿ, ಮೇ. ೭: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇದೀಗ ಗುತ್ತಿಗೆ ಕಾರ್ಮಿಕರೇ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಪರವಾದ ಹೋರಾಟಗಳಿಗೆ ಹೆಚ್ಚು ಶಕ್ತಿ ತುಂಬಿಕೊಡುವ ನಾಯಕರ ಅಗತ್ಯವಿದೆ. ಗುತ್ತಿಗೆ ಕಾರ್ಮಿಕರು ಮೇ.೮ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ನಾಯಕನ ಆಯ್ಕೆಯಲ್ಲಿ ಮುಂದಾಗಿದ್ದಾರೆ.
    ಅಭಿವೃದ್ಧಿ ನಿರೀಕ್ಷೆಯೊಂದಿಗೆ ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಮುನ್ನಡೆಯುತ್ತಿರುವ ಕಾರ್ಖಾನೆಯಲ್ಲಿ . ಒಂದು ಕಾಲದಲ್ಲಿ ಸುಮಾರು ೧೫ ಸಾವಿರಕ್ಕೂ ಹೆಚ್ಚು ಕಾಯಂ ಹಾಗು ೧೦ ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ದೇಶದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂತಹ ಬೃಹತ್ ಕಾರ್ಖಾನೆಯಲ್ಲಿ ಇದೀಗ ಕೇವಲ ೨೧೭ ಕಾಯಂ ಹಾಗು ೫೩ ಅಧಿಕಾರಿಗಳು ಮತ್ತು ೧೧೪೫ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಉದ್ಯೋಗ ಭದ್ರತೆ ಇಲ್ಲ, ತಿಂಗಳ ಪೂರ್ತಿ ಉದ್ಯೋಗವಿಲ್ಲ, ಇಎಸ್‌ಐ ಸೌಲಭ್ಯಗಳು ಸಮರ್ಪಕವಾಗಿಲ್ಲ, ಅಲ್ಲದೆ ಹಲವಾರು ಕಾರ್ಮಿಕ ಸೌಲಭ್ಯಗಳಿಂದ ವಂಚಿತರಾಗಿರುವ ಗುತ್ತಿಗೆ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಅಧಿಕೃತ ಕಾರ್ಮಿಕ ಸಂಘ ಸಹ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಆದರೂ ಇವರ ಬೇಡಿಕೆಗಳು ಈಡೇರುತ್ತಿಲ್ಲ.

ಕಾರ್ಖಾನೆಯನ್ನು ಅಭಿವೃದ್ದಿಪಡಿಸುವಲ್ಲಿ ಅಥವಾ ಖಾಸಗೀಕರಣಗೊಳಿಸುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಸ್ತುತ ಕಾರ್ಖಾನೆ ಇರುವ ವ್ಯವಸ್ಥೆಯಲ್ಲಿಯೇ ಸಣ್ಣ ಪ್ರಮಾಣದ ಉತ್ಪಾದನೆ, ಸಣ್ಣ ಪ್ರಮಾಣದ ಲಾಭದಲ್ಲಿ ಮುನ್ನಡೆಯುತ್ತಿದೆ. ಚಿಕ್ಕ ಚಿಕ್ಕ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈ ನಡುವೆ ಪ್ರಾಧಿಕಾರ ರು. ೧೩ ಕೋ. ಬಿಡುಗಡೆಗೊಳಿಸಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘ ತಟಸ್ಥವಾಗಿ ಉಳಿದುಕೊಂಡಿದ್ದು, ಯಾವುದೇ ಹೋರಾಟಕ್ಕೆ ಮುಂದಾಗದೆ ಮುಂದಿನ ಬೆಳವಣಿಗೆಗಳನ್ನು ಎದುರು ನೋಡುತ್ತಿದೆ. ಕಾರ್ಮಿಕ ಸಂಘ ಸದಾ ಕಾಲ ಗುತ್ತಿಗೆ ಕಾರ್ಮಿಕರ ಪರವಾಗಿದ್ದು, ಅವರ ಹೋರಾಟಗಳಲ್ಲಿ ಕೈಜೋಡಿಸಲಿದೆ.
          - ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಭದ್ರಾವತಿ

    ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದೆಡೆ ಅಗತ್ಯವಿರುವ ಬಂಡವಾಳ ತೊಡಗಿಸದೆ, ಮತ್ತೊಂದೆಡೆ ಖಾಸಗಿಕರಣಗೊಳ್ಳದೆ ಅತಂತ್ರ ಸ್ಥಿತಿಯಲ್ಲಿ ಮುನ್ನಡೆಯುವಂತಾಗಿದೆ. ಈ ನಡುವೆ ೩-೪ ವರ್ಷಗಳಿಂದ ಉಕ್ಕು ಪ್ರಾಧಿಕಾರ ಸರ್ಕಾರ ಕೈಗೊಳ್ಳುವ ತೀರ್ಮಾನಗಳಿಗೆ ಎದುರು ನೋಡದೆ ಕಾರ್ಖಾನೆಯನ್ನು ಸಂಕಷ್ಟದಲ್ಲಿಯೂ ಮುನ್ನಡೆಸಿಕೊಂಡು ಹೋಗುವ ದೃಢ ಸಂಕಲ್ಪ ಕೈಗೊಂಡಿರುವಂತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಅಲ್ಪ ಪ್ರಮಾಣದ ಬಂಡವಾಳ, ಅಲ್ಪ ಪ್ರಮಾಣದ ಉತ್ಪಾದನೆ, ಅಲ್ಪ ಪ್ರಮಾಣದ ಲಾಭ ಕಾಯ್ದುಕೊಂಡು ಬರುತ್ತಿದೆ.  
    ಈ ಎಲ್ಲಾ ಬೆಳವಣಿಗೆಗಳ ನಡುವೆ ಗುತ್ತಿಗೆ ಕಾರ್ಮಿಕರು ತಮ್ಮ ನಾಯಕನ ಆಯ್ಕೆಯಲ್ಲಿ ತೊಡಗಿರುವುದು ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅಧ್ಯಕ್ಷ-೧,  ಉಪಾಧ್ಯಕ್ಷ-೨, ಪ್ರಧಾನ ಕಾರ್ಯದರ್ಶಿ-೧, ಸಹ ಕಾರ್ಯದರ್ಶಿ-೩, ಖಜಾಂಚಿ-೧ ಹಾಗು ೧೨ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಹಲವು ಮಂದಿ ಮೊದಲ ಬಾರಿಗೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ನ್ಯೂಟೌನ್ ಸರ್‌ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಯಲಿದೆ.
    ಗುತ್ತಿಗೆ ಕಾರ್ಮಿಕರು ಸಹ ವಿವಿಧ ರಾಜಕೀಯ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿದ್ದು, ತಮ್ಮ ನಾಯಕನ ಆಯ್ಕೆಯಲ್ಲಿ ರಾಜಕೀಯ ಪಕ್ಷವನ್ನು ಬದಿಗಿಟ್ಟು ಸಮರ್ಥರನ್ನು ಆಯ್ಕೆ ಮಾಡುವಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಆಗ ಮಾತ್ರ ಅವರ ಮುಂದಿನ ಹೋರಾಟಗಳು ರಾಜಕೀಯ ಪ್ರೇರಿತವಾಗದೆ ಕಾರ್ಮಿಕರ ಹೋರಾಟವಾಗಲಿವೆ ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

No comments:

Post a Comment