Sunday, May 8, 2022

ಮಳೆಯೊಂದಿಗೆ ಏಕಾಏಕಿ ಬಿರುಗಾಳಿ : ಧರೆಗುರುಳಿ ಬಿದ್ದ ಮರಗಳು, ವಿದ್ಯುತ್ ಕಂಬಗಳು

ಭದ್ರಾವತಿ ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ವಿಐಎಸ್‌ಎಲ್ ಕ್ರೀಡಾಂಗಣ ಸಮೀಪದ ಮಹಾತ್ಮಗಾಂಧಿ ಉದ್ಯಾನವನದ ರಸ್ತೆ ಬದಿಯಲ್ಲಿರುವ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವುದು.
    ಭದ್ರಾವತಿ, ಮೇ. ೮ : ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ಹಲವೆಡೆ ಮರಗಳು ಹಾಗು ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವ ಘಟನೆ ನಡೆದಿದೆ.
    ನ್ಯೂಟೌನ್, ಜನ್ನಾಪುರ, ಸಿದ್ದಾಪುರ ಹಾಗು ಹಳೇನಗರ ಭಾಗದಲ್ಲಿ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡಿದ್ದು, ವಿಐಎಸ್‌ಎಲ್ ಕ್ರೀಡಾಂಗಣ ಸಮೀಪದ ಮಹಾತ್ಮಗಾಂಧಿ ಉದ್ಯಾನವನದ ರಸ್ತೆ ಬದಿಯಲ್ಲಿರುವ ಮರಗಳು, ವಿಐಎಸ್‌ಎಲ್ ಜೋಡಿ ರಸ್ತೆಯ ಎರಡು ಬದಿಯಲ್ಲಿರುವ ಮರಗಳು ಧರೆಗುರುಳಿ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ತಂತಿಗಳು ಕತ್ತರಿಸಿಕೊಂಡು ಹೋಗಿವೆ. ಇದೆ ರೀತಿ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಬಳಿ ಮರದ ರೊಂಬೆಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಕತ್ತರಿಸಿ ಹೋಗಿವೆ.
    ಜನ್ನಾಪುರದಲ್ಲಿ ರಮಾವೆಂಕಟೇಶ್ ಎಂಬುವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಇದರಿಂದಾಗಿ ಕಟ್ಟಡಕ್ಕೆ ಹಾನಿಯಾಗಿದೆ. ತೆಂಗಿನ ಮರ ಕಡಿತಲೆ ಮಾಡುವಂತೆ ಹಲವಾರು ಬಾರಿ ಮನೆ ಮಾಲೀಕರಿಗೆ ಸೂಚಿಸಿದ್ದರೂ ಸಹ ನಿರ್ಲಕ್ಷ್ಯತನ ವಹಿಸಿದ್ದರು ಎಂದು ರಮಾವೆಂಕಟೇಶ್ ದೂರಿದ್ದಾರೆ.
    ಅಲ್ಲದೆ ಹಲವೆಡೆ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿದ್ದು, ಈ ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ಕಡಿತವಾಗಿದೆ. ಭಾನುವಾರ ಬೆಳಿಗ್ಗೆಯಿಂದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಉಳಿದಂತೆ ಹಳೇನಗರ ಭಾಗದಲ್ಲೂ ಬಿರುಗಾಳಿಯಿಂದಾಗಿ ಸ್ವಲ್ಪ ಪರಿಣಾಮದಲ್ಲಿ ಹಾನಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ.



ಭದ್ರಾವತಿ ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ಜನ್ನಾಪುರದಲ್ಲಿ ರಮಾವೆಂಕಟೇಶ್ ಎಂಬುವರ ಮನೆ ಮೇಲೆ ತೆಂಗಿನ ಮುರಿದು ಬಿದ್ದಿರುವುದು.

No comments:

Post a Comment