ಶ್ರೀರಂಗರಾಜಪುರೆ ಮಾದರಿ ಅಧಿಕಾರಿ : ನಗರಸಭೆ ಆಡಳಿತ ಮೆಚ್ಚುಗೆ
ಭದ್ರಾವತಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜಪುರೆ ಅವರು ವಯೋ ನಿವೃತ್ತಿ ಹೊಂದಿದ್ದ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಜು. ೧ : ಸರ್ಕಾರಿ ಅಧಿಕಾರಿಗಳು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಈ ನಿಟ್ಟಿನಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜಪುರೆ ಅವರು ಮಾದರಿಯಾಗಿದ್ದಾರೆಂದು ನಗರಸಭೆ ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿತು.
ಶ್ರೀರಂಗರಾಜಪುರೆ ಅವರು ವಯೋ ನಿವೃತ್ತಿ ಹೊಂದಿದ್ದ ಹಿನ್ನಲೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಹಿರಿಯ ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಸವರಾಜ ಬಿ ಆನೇಕೊಪ್ಪ, ಲತಾ ಚಂದ್ರಶೇಖರ್, ಪ್ರಮುಖರಾದ ಬಿ. ಗಂಗಾಧರ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಮಾತನಾಡಿ, ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಯಾವ ರೀತಿ ಸ್ಪಂದಿಸುತ್ತಾರೆಂಬುದು ಅವರು ಮಾಡುವ ಕೆಲಸಗಳಿಂದ ತಿಳಿದುಕೊಳ್ಳಬಹುದಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮಲ್ಲಿನ ವೃತ್ತಿ ಅನುಭವ, ಬುದ್ಧಿವಂತಿಕೆಯಿಂದ ಕರ್ತವ್ಯ ನಿರ್ವಹಿಸುವವರು ಬಹಳ ವಿರಳ. ಇಂತಹ ವ್ಯಕ್ತಿಗಳಲ್ಲಿ ಶ್ರೀರಂಗರಾಜಪುರೆಯವರು ಸಹ ಒಬ್ಬರಾಗಿದ್ದಾರೆ. ಯಾವುದೇ ಕಳಂಕಕ್ಕೆ ಒಳಗಾಗದೆ ತಮ್ಮ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂತಹ ಅಧಿಕಾರಿಗಳ ಅವಶ್ಯಕತೆ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀರಂಗರಾಜಪುರೆ ಅವರು ನನ್ನ ಕರ್ತವ್ಯದ ಅವಧಿಯಲ್ಲಿ ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದು, ಕರ್ತವ್ಯವನ್ನು ಸಮರ್ಥವಾಗಿ ನಿಭಾಹಿಸಲು ಸಹಕರಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಸದಸ್ಯರು, ಸಿಬ್ಬಂದಿಗಳು ಪೌರಕಾರ್ಮಿಕರು ಹಾಗು ವಿವಿಧ ಸಂಘ-ಸಂಸ್ಥೆಗಳು ಶ್ರೀರಂಗರಾಜಪುರೆ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದವು.
No comments:
Post a Comment