Friday, July 1, 2022

ನೇರಪಾವತಿ, ಹೊರ ಗುತ್ತಿಗೆ ಪೌರಕಾರ್ಮಿಕರನ್ನು ತಕ್ಷಣ ಕಾಯಂಗೊಳಿಸಿ

ಭದ್ರಾವತಿ ನಗರಸಭೆಯಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೇರಪಾವತಿ ಹಾಗು ಹೊರಗುತ್ತಿಗೆ ಪೌರಕಾರ್ಮಿಕರನ್ನು ತಕ್ಷಣ ಕಾಯಂಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಮುಷ್ಕರ ನಡೆಸಲಾಯಿತು.
    ಭದ್ರಾವತಿ, ಜು. ೧: ನಗರಸಭೆಯಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೇರಪಾವತಿ ಹಾಗು ಹೊರಗುತ್ತಿಗೆ ಪೌರಕಾರ್ಮಿಕರನ್ನು ತಕ್ಷಣ ಕಾಯಂಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಮುಷ್ಕರ ನಡೆಸಲಾಯಿತು.
    ನಗರಸಭೆ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಉದ್ಯೋಗ ಕಾಯಂಗೊಳಿಸುವಂತೆ ಮನವಿ ಮಾಡಿದ್ದು, ಆದರೆ ಇದಕ್ಕೆ ಸರ್ಕಾರ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಪ್ರಸ್ತುತ ನೀಡಲಾಗುತ್ತಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗದ ಭದ್ರತೆ ಜೊತೆಗೆ ಜೀವನದ ಭದ್ರತೆ ಸಹ ಇಲ್ಲದಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
    ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಸುವುದಾಗಿ ಎಚ್ಚರಿಸಿ ತಕ್ಷಣ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗುವಂತೆ ಆಗ್ರಹಿಸಿದರು. ತಹಸೀಲ್ದಾರ್ ಹಾಗು ಪೌರಾಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ, ಪೌರಾಡಳಿತ ಸಚಿವರಿಗೆ ಹಾಗು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ನಗರಸಭೆವರೆಗೂ ಮೆರವಣಿಗೆ ನಡೆಸಲಾಯಿತು.
    ಮುಷ್ಕರಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಸದಸ್ಯರು ಪಕ್ಷ-ಬೇಧ ಮರೆತು ಬೆಂಬಲ ಸೂಚಿಸಿದರು. ಅಲ್ಲದೆ ಕಾಂಗ್ರೆಸ್, ಜಾತ್ಯತೀತ ಜನತಾದಳ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಪೌರ ಸೇವಾ ನೌಕರರ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.
    ಹೊರ ಗುತ್ತಿಗೆ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಮದ್ ಗೌಸ್, ತಾಲೂಕು ಅಧ್ಯಕ್ಷ ಪ್ರಭಾಕರ್, ನೇರಪಾವತಿ ಪೌರ ಕಾರ್ಮಿಕರ ಸಂಘದ ಸತ್ಯ, ನಾಗರಾಜ್, ಶಿವಮೊಗ್ಗ ಮಹಾನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ನರಸಿಂಹಮೂರ್ತಿ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಪ್ರಮುಖರು, ನಗರಸಭೆ ನೇರಪಾವತಿ ಪೌರ ಕಾರ್ಮಿಕರು, ಲೋಡರ್‍ಸ್, ಕಸದ ವಾಹನ ಚಾಲಕರು ಹಾಗು ಹೆಲ್ಪರ್‍ಸ್, ಶೌಚಾಲಯ ನೌಕರರು ಹಾಗು ನೇರಪಾವತಿ ಹೊರಗುತ್ತಿಗೆಯಲ್ಲಿರುವ ಎಲ್ಲಾ ವಿಭಾಗದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
    ರಾಜ್ಯ ಸಂಘದ ಕರೆಯ ಮೇರೆಗೆ ಮುಷ್ಕರವನ್ನು ಸಂಜೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೈಗೊಳ್ಳಲಾಗುವ ತಿರ್ಮಾನ ಮುಂದಿನ ಹೋರಾಟ ನಿರ್ಧರಿಸಿದೆ ಎನ್ನಲಾಗಿದೆ.

No comments:

Post a Comment