Tuesday, July 19, 2022

ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಿ

ಅರಿವು ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮೃತ್ಯುಂಜಯ

ಭದ್ರಾವತಿ ರೋಟರಿ ಕ್ಲಬ್  ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಕರ್ನಾಟಕ ಲೋಕಸೇವಾ ಆಯೋಗ ೧೯೮೪ ಕಾಯ್ದೆ ಅರಿವು ಕಾರ್ಯಕ್ರಮ   ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೧೯: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕೆಲಸಗಳನ್ನು ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕೆಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮೃತ್ಯುಂಜಯ ಹೇಳಿದರು.
      ಅವರು ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಲೋಕಾಯುಕ್ತ ಕಚೇರಿ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ಲೋಕಸೇವಾ ಆಯೋಗ ೧೯೮೪ ಕಾಯ್ದೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
      ಅಧಿಕಾರಿಗಳು, ಸಿಬ್ಬಂದಿಗಳು ಕೆಸಿಎಸ್‌ಆರ್ ಪ್ರಕಾರ ಕರ್ತವ್ಯ ನಿರ್ವಹಿಸಬೇಕು. ಯಾವದೇ ಕೆಲಸವನ್ನು ಕೊನೆಯ ದಿನದವರೆಗೂ ಕಾಯ್ದಿರಿಸಬಾರದು. ತಮ್ಮ ಕರ್ತವ್ಯದಲ್ಲಿ ಎಲ್ಲೂ ಸಹ ಲೋಪವಾಗದಂತೆ ಎಚ್ಚರವಹಿಸಬೇಕು. ಇತ್ತೀಚಿನ ಆಡಳಿತ ಸಾಕಷ್ಟು ಸುಧಾರಣೆಯಾಗಿದೆ ಎಂದರು.
      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್,  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಆ ನೌಕರಿಗೆ ಚ್ಯುತಿ ಬರದಂತೆ ಜವಾಬ್ದಾರಿಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
      ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಮನುಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸರ್ಕಾರಿ ಅಭಿಯೋಜಕ ತ್ಯಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾಜಿ ನಿರೂಪಿಸಿದರು. ತಾಲೂಕು ಪಂಚಾಯಿತಿ ಅಧಿಕಾರಿ ಉಪೇಂದ್ರ ಸ್ವಾಗತಿಸಿ, ಬಾರಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ವಂದಿಸಿದರು.  ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.  


No comments:

Post a Comment