ಕೆ. ಮಧುಸೂಧನ್
ಭದ್ರಾವತಿ, ಜು. ೨೫ : ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಹಿರಿಯೂರು ಗ್ರಾಮದ ಗ್ರಾಮಠಾಣಾ ಜಾಗವನ್ನು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿ ಕೆ. ಮಧುಸೂಧನ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೆ. ಮಧುಸೂಧನ್ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಳೇ ಹಿರಿಯೂರು ಗ್ರಾಮದ ಗ್ರಾಮ ಠಾಣಾ ಜಾಗವನ್ನು ನಿಯಮಬಾಹಿರವಾಗಿ ಒಟ್ಟು ೧೪ ಜನ ಖಾಸಗಿ ವ್ಯಕ್ತಿಗಳಿಗೆ ಸ್ವತ್ತಿನ ಸೃಜನೆ ಮಾಡಿ ಕೈ ಬರಹದಲ್ಲಿ ನಮೂನೆ ೯ ಮತ್ತು ೧೧ ಎಗಳನ್ನು ವಿತರಿಸಿ, ಖಾತೆಗಳಿಗೆ ಕಂದಾಯ ರಶೀದಿಗಳನ್ನು ನೀಡಿದ್ದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೨೦೦೯ ಮತ್ತು ೨೧೦ಗಳನ್ನು ಉಲ್ಲಂಘಿಸಿರುವ ಕುರಿತು ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೆ ಈ ಸಂಬಂಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿತ್ತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಅವರಿಗೆ ಪರಿಶೀಲನಾ ವರದಿ ಸಲ್ಲಿಸಿದ್ದರು.
No comments:
Post a Comment