Sunday, July 24, 2022

ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಕೆ.ಎನ್ ಶ್ರೀಹರ್ಷ

ಭಾರತೀಯ ಮಜ್ದೂರ್ ಸಂಘ, ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಭದ್ರಾವತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜು. ೨೪: ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಹೇಳಿದರು.
    ಅವರು ಭಾನುವಾರ ಭಾರತೀಯ ಮಜ್ದೂರ್ ಸಂಘ, ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಶ್ರಮ ಜೀವಿಗಳಾದ ಅಸಂಘಟಿತ ಕಾರ್ಮಿಕರು ಕೊನೆಯವರೆಗೂ ಬಡತನದಲ್ಲಿಯೇ ಬದುಕು ಸಾಗಿಸುವಂತಾಗಿದೆ. ಪ್ರಸ್ತುತ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೋಟ್ಯಾಂತರ ರು. ಹಣ ಮೀಸಲಿಡುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಸರ್ಕಾರದಿಂದ ಕಡ್ಡಾಯವಾಗಿ ಗುರುತಿನ ಪಡೆದುಕೊಳ್ಳಬೇಕು. ಆ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಭಾರತೀಯ ಮಜ್ದೂರು ಸಂಘದ ಎಚ್.ಎಲ್ ವಿಶ್ವನಾಥ್ ಮಾತನಾಡಿ,  ಅಸಂಘಟಿತ ಕಾರ್ಮಿಕರು ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಸಂಘಟಿತರಾಗಬಾರದು. ನಾವು ಮಾಡುವ ಕೆಲಸ ದೇಶಕ್ಕಾಗಿ ಎಂಬ ಅಭಿಮಾನದ ಮೇಲೆ ಸಂಘಟಿತರಾಗುವ ಮೂಲಕ ದೇಶ ಸೇವೆಗೂ ಸಿದ್ದ ಎಂಬುದನ್ನು ಎತ್ತಿ ಹಿಡಿಯಬೇಕೆಂದರು.
    ನೂತನ ಪದಾಧಿಕಾರಿಗಳು :
    ಭಾರತೀಯ ಮಜ್ದೂರು ಸಂಘ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ರಘು, ಪ್ರಧಾನ ಕಾರ್ಯದರ್ಶಿಯಾಗಿ ಪಚ್ಚಪ್ಪ, ಖಜಾಂಚಿಯಾಗಿ ಫ್ಯಾಟ್ರಿಕ್, ಕಾರ್ಯದರ್ಶಿಯಾಗಿ ಪ್ರವೀಣ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರಂಗಸ್ವಾಮಿ ಮತ್ತು ಡಿ. ಜೈರಾಮು ಆಯ್ಕೆಯಾದರು.
    ಕಾರ್ಯಕ್ರಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮಂಜುನಾಥ್, ಪಚ್ಚಪ್ಪ, ಫ್ಯಾಟ್ರಿಕ್, ರಘು ಮತ್ತು ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ್ ನಿರೂಪಿಸಿದರು.

No comments:

Post a Comment